ಮಳೆಗಾಲ ಶುರುವಾಗಿದೆ ಅಂದ್ರೆ ಪ್ರತಿಯೊಬ್ಬರಿಗೆ ಒಂದು ರೀತಿಯ ಖುಷಿ ಇದ್ದೇ ಇರುತ್ತದೆ. ಅದ್ರಲ್ಲೂ ಪುಟ್ಟ ಮಕ್ಕಳಿಗೆ ಸುರಿಯುತ್ತಿರೋ ಮಳೆಯನ್ನು ನೋಡೋದೇ ಒಂದು ರೀತಿ ಖುಷಿ. ಆದರೆ ಮಳೆಗಾಲದಲ್ಲಿ ಹವಾಮಾನ ಬದಲಾಗೋದ್ರಿಂದ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಮಾಡೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಅಷ್ಟಕ್ಕು ಮಳೆಗಾಲದಲ್ಲಿ ಮಕ್ಕಳ ಕಾಳಜಿ ಹೇಗಿರಬೇಕು ಅನ್ನೋದನ್ನು ತಿಳಿಯೋಣ.
1. ಮನೆ ಸ್ವಚ್ಛವಾಗಿರಲಿ
ಮಕ್ಕಳಿರೋ ಮನೆಯನ್ನು ಎಷ್ಟು ಸ್ವಚ್ಛವಾಗಿಟ್ಟರೂ ಸಾಕಾಗೋದಿಲ್ಲ. ಅದ್ರಲ್ಲೂ ಮಳೆಗಾಲದಲ್ಲಿ ಮನೆಯ ಮೂಲೆ ಮೂಲೆಯೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಇನ್ನೂ ಮನೆ ಒಳಗಡೆ ಮಾತ್ರವಲ್ಲದೇ ಸ್ನಾನದ ಕೋಣೆ, ಪಕ್ಕದ ಬಾಲ್ಕನಿಗಳು ಸೇರಿದಂತೆ ಮನೆಯ ವಿವಿಧ ಪ್ರದೇಶಗಳ ಸ್ವಚ್ಛತೆ ಬಗ್ಗೆ ಗಮನಹರಿಸೋದು ತುಂಬಾನೇ ಮುಖ್ಯ. ಮತ್ತು ನೀರಿನ ಕೊಚ್ಚೆ ಗುಂಡಿಗಳು ಮತ್ತು ತೇವ ಇರುವ ಪ್ರದೇಶಗಳ ಬಗ್ಗೆ ಕೂಡ ಗಮನ ಹರಿಸಿ.
ಏಕೆಂದರೆ ಅವುಗಳು ಸೊಳ್ಳೆಗಳು ಮತ್ತು ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಮಳೆಗಾಲದಲ್ಲಿ ವಿದ್ಯುತ್ ಅಪಘಾತಗಳು ಸಾಮಾನ್ಯವಾಗಿದೆ. ಆದ್ದರಿಂದ ಬಳಕೆಯಾಗದ ವಿದ್ಯುತ್ ಪ್ಲಗ್‌ಗಳನ್ನು ಮುಚ್ಚಿ. ಮತ್ತು ಜೋತುಬಿದ್ದ ತಂತಿಗಳ ಬಗ್ಗೆ ಗಮನ ಹರಿಸುವುದು ಕೂಡ ಮುಖ್ಯವಾಗುತ್ತದೆ. ಮಕ್ಕಳು ಮಾತ್ರವಲ್ಲದ ದೊಡ್ಡವರ ಆರೋಗ್ಯ ದೃಷ್ಟಿಯಿಂದಲೂ ಈ ಬಗ್ಗೆ ಗಮನ ಹರಿಸೋದು ಮುಖ್ಯವಾಗುತ್ತದೆ.
2. ತಾಯಂದಿರೂ ಕೂಡ ಆರೋಗ್ಯಕರ ಆಹಾರ ಸೇವಿಸಬೇಕು
ಮಕ್ಕಳಿಗೆ ಎದೆಹಾಲುಣಿಸುವ ತಾಯಿಯೂ ಕೂಡ ಆರೋಗ್ಯಕರ ಆಹಾರವನ್ನು ಸೇವನೆ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಯಾಕಂದ್ರೆ ನೀವು ತಿನ್ನುವ ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಕೂಡ ಮಕ್ಕಳಿಗೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ತಾಯಂದಿರು ಜೀವಸತ್ವಗಳು ಮತ್ತು ಖನಿಜಗಳಂತಹ ಉತ್ತಮ ಪೋಷಕಾಂಶಗಳನ್ನು ಸೇವನೆ ಮಾಡಬೇಕು.
3. ಸೊಳ್ಳೆಯಿಂದ ತಾಯಿ ಹಾಗೂ ಮಗು ದೂರವಿರಬೇಕು
ಸೊಳ್ಳೆ ಕಡಿತ ಪುಟ್ಟ ಮಕ್ಕಳಿಗೆ ಹೆಚ್ಚಿನ ಹಾನಿ ಮಾಡುತ್ತದೆ. ಮಕ್ಕಳಿಗೆ ಅದನ್ನು ಸಹಿಸಿಕೊಳ್ಳುವ ಶಕ್ತಿ ಇರೋದಿಲ್ಲ. ಜೊತೆಗೆ ರೋಗಗಳ ಅಪಾ ಕೂಡ ಹೆಚ್ಚಿದೆ. ತಾಯಿಯು ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬೇಕು. ಯಾಕಂದ್ರೆ ನಿಮ್ಮ ಮೂಲಕ ಮಗುವಿಗೂ ರೋಗ ಹರಡುವ ಅಪಾಯ ಹೆಚ್ಚಿದೆ. ಅದ್ರಲ್ಲೂ ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿರೋದ್ರಿಂದ ಸೊಳ್ಳೆ ಪರದೆಯನ್ನು ಅಳವಡಿಸೋದು ಉತ್ತಮ. ಇದ್ರ ಜೊತೆಗೆ ನೈಸರ್ಗಿಕ ಪದಾರ್ಥಗಳನ್ನು ಹಾಕಿ ಸೊಳ್ಳಿ ಕ್ರೀಮ್ ತಯಾರಿಸಿದ್ದರೆ ಅದನ್ನು ಮಗುವಿನ ತ್ವಚೆಗೆ ಹಚ್ಚಬಹುದು.
4. ಆಗಾಗ್ಗೆ ಡೈಪರ್ ಬದಲಾಯಿಸುತ್ತಿರಿ
ಮಕ್ಕಳು ಡೈಪರ್ ಗಳನ್ನು ಬೇಗನೆ ಒದ್ದೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಇದರ ಬಗ್ಗೆ ಗಮನ ಕೊಟ್ಟು ಆಗಾಗ್ಗೆ ಬದಲಾಯಿಸುತ್ತಾ ಇರಬೇಕು. ಇಲ್ಲವಾದರೆ ಅನಾರೋಗ್ಯಕರ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ಸಂತಾನೋತ್ಪತ್ತಿಯ ಸ್ಥಳವಾಗಿ ಬದಲಾಗುವ ಸಾಧ್ಯತೆ ಇರುತ್ತದೆ. ಮಳೆಗಾಲದಲ್ಲಿ ಈ ಬಗ್ಗೆ ಗಮನ ಕೊಡೋದು ತುಂಬಾನೇ ಮುಖ್ಯವಾಗುತ್ತದೆ. ಇದರ ಹೊರತಾಗಿ ಡೈಪರ್ ಮುಕ್ತವಾಗಿ ಇರೋದಕ್ಕೂ ಮಕ್ಕಳಿಗೆ ಅವಕಾಶ ಕೊಡಿ.
5. ಬೆಚ್ಚಗಿನ ಉಡುಪುಗಳನ್ನು ಧರಿಸಿ
ಮನ್ಸೂನ್ ಸಮಯದಲ್ಲಿ ದೊಡ್ಡವರ ರೀತಿ ಮಕ್ಕಳಿಗೂ ಕೂಡ ಬೆಚ್ಚಗಿನ ಉಡುಪುಗಳನ್ನೇ ಧರಿಸಬೇಕು. ಮಳೆಗಾಲದಲ್ಲಿ ಗಾಳಿಯ ತೇವಾಂಶ ಹೆಚ್ಚಾಗಿರುತ್ತದೆ. ಅಂತಹ ಸಂದರ್ಭಗಳಲ್ಲಿ ನಿಮ್ಮ ಮಗುವಿಗೆ ದಪ್ಪವಾದ ಹತ್ತಿಯಿಂದ ಮಾಡಿದ ಬಟ್ಟೆಗಳನ್ನು ಅಥವಾ ಉಣ್ಣೆಯಿಂದ ಮಾಡಿದ ಹಗುರವಾದ ಬಟ್ಟೆಗಳನ್ನು ಧರಿಸಲು ಅವಕಾಶ ನೀಡುವುದು ಉತ್ತಮ. ಇವು ಮಕ್ಕಳನ್ನು ಬೆಚ್ಚಗಿಡಲು ಸಹಾಯ ಮಾಡುವುದು ಮಾತ್ರವಲ್ಲದೆ. ಅವರ ಜೊತೆಗೆ ಚರ್ಮವನ್ನು ಉಸಿರಾಡಲು ಸಹ ಅನುಮತಿಸುತ್ತದೆ.
6. ಕೈಗಳನ್ನು ಸ್ವಚ್ಛವಾಗಿರಿಸಿ
ಕೈಗಳ ಮೂಲಕವೇ ನಿಮಗೆ ಹಾಗೂ ನಿಮ್ಮ ಮಗುವಿಗೂ ರೋಗಗಳು ಹರಡುವ ಅಪಾಯ ಹೆಚ್ಚಿದೆ. ಮಳೆಗಾಲದಲ್ಲಿ ನಿಮ್ಮ ಮಗುವಿನ ಕೈಗಳನ್ನು ಸ್ವಚ್ಛವಾಗಿಡುವಂತೆ ನೋಡಿಕೊಳ್ಳಿ. ಉಗುರನ್ನು ಉದ್ದ ಬೆಳೆಯಲು ಅವಕಾಶ ನೀಡಬೇಡಿ. ಮಗುವಿನ ಉಗುರನ್ನು ಕತ್ತರಿಸಿ. ಜೊತೆಗೆ ಅದರ ಕೈಗೆ ಸಾಕ್ಸ್ ಬಳಸಿ. ಇನ್ನೂ ನೀವು ಮಗುವನ್ನು ಮುಟ್ಟುವಾಗ ಯಾವಾಗಲೂ ಕೈ ತೊಳೆದು ಮುಟ್ಟಿದರೆ ಒಳ್ಳೆಯದು. ಇನ್ನೂ ಮಗುವಿನ ಆಟಿಕೆಗಳನ್ನು ಸ್ವಚ್ಛವಾಗಿಡಿ.
7. ತಾಜಾ ಆಹಾರವನ್ನೇ ನೀಡಿ
ನಿಮ್ಮ ಮಗು ಘನ ಆಹಾರವನ್ನು ತಿನ್ನೋದಕ್ಕೆ ಶುರು ಮಾಡಿದ್ದರೆ ಮಳೆಗಾಲದಲ್ಲಿ ಆದಷ್ಟು ತಾಜಾ ಆಹಾರವನ್ನೇ ಮಕ್ಕಳಿಗೆ ನೀಡಬೇಕು. ಅದ್ರಲ್ಲೂ ಕೊಂಚ ಬಿಸಿ ಆಹಾರವನ್ನೇ ನೀಡಿ. ಹಿಂದಿನ ದಿನ ತಯಾರಿಸಿದ ಆಹಾರ, ಬೆಳಗ್ಗೆ ತಯಾರಿಸಿದ ಆಹಾರವನ್ನು ಮಧ್ಯಾಹ್ನ ನೀಡುವುದನ್ನು ಮಾಡಬೇಡಿ. ಇದರಿಂದ ಮಗು ಕಾಯಿಲೆ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಮಳೆಗಾಲದಲ್ಲಿ ಪುಟ್ಟ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಈ ಮೇಲಿನ ವಿಚಾರಗಳ ಬಗ್ಗೆ ಗಮನ ಕೊಡೋದನ್ನು ಮರೀಬೇಡಿ.