ಪುಣೆ: ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುನ್ನ ಪಾಟ್ನಾದಲ್ಲಿ ಕಳೆದ ವಾರ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ 'ಪ್ರಧಾನಿ ಹುದ್ದೆ' ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರದ ಬಾರಾಮತಿ ಪಟ್ಟಣದಲ್ಲಿ ಪವಾರ್ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದುಬ್ಬರ, ನಿರುದ್ಯೋಗ ಮತ್ತು ಕೋಮುವಾದಿ ಶಕ್ತಿಗಳನ್ನು ನಿಯಂತ್ರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕುರಿತು ಚರ್ಚೆಗಳು ನಡೆದಿವೆ ಎಂದು ಹೇಳಿದರು.
ಪ್ರತಿಪಕ್ಷಗಳ ಸಭೆಯನ್ನು ಟೀಕಿಸಿದ್ದಕ್ಕಾಗಿ ಅವರು ಆಡಳಿತಾರೂಢ ಭಾರತೀಯ ಜನತಾ ಪಕ್ಷದ ವಿರುದ್ಧವೂ ವಾಗ್ದಾಳಿ ನಡೆಸಿದರು. ಸಮಾವೇಶದ ಬಗ್ಗೆ ಬಿಜೆಪಿ ಏಕೆ ಚಿಂತಿಸುತ್ತಿದೆ ಎಂದ ಪವಾರ್, ಬಿಜೆಪಿಯವರಿಗೆ ರಾಜಕೀಯ ಪ್ರಬುದ್ಧತೆಯ ಕೊರತೆಯಿದೆ ಎಂದು ಹೇಳಿದ್ದಾರೆ.
ಹನ್ನೆರಡು ಕ್ಕೂ ಹೆಚ್ಚು ವಿರೋಧ ಪಕ್ಷಗಳ 32 ನಾಯಕರು ಶುಕ್ರವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಪಾಟ್ನಾದಲ್ಲಿ ನಿರ್ಣಾಯಕ ಸಭೆಯನ್ನು ನಡೆಸಿದರು ಮತ್ತು 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಒಗ್ಗಟ್ಟಿನಿಂದ ಎದುರಿಸಲು ನಿರ್ಧರಿಸಿದರು.
ವಿರೋಧ ಪಕ್ಷಗಳ ಸಮಾವೇಶ ಕುರಿತು ಪ್ರತಿಕ್ರಿಯಿಸಿದ್ದ ಬಿಜೆಪಿ, ಸಭೆಗೆ 19 ಪ್ರಧಾನಿ ಹುದ್ದೆ ಆಕಾಂಕ್ಷಿಗಳು ಬಂದಿದ್ದರು ಎಂದ ಬಿಜೆಪಿ ಲೇವಡಿ ಮಾಡಿತ್ತು, ಈ ಟೀಕೆಗೆ ಪ್ರತಿಕ್ರಿಯಿಸಿದ ಪವಾರ್, ಇದೊಂದು ಬಾಲಿಶ ಹೇಳಿಕೆ ಎಂದಿದ್ದಾರೆ.
ಧರ್ಮ ಮತ್ತು ಜಾತಿಯ ಆಧಾರದ ಮೇಲೆ ಸಮುದಾಯಗಳ ನಡುವಿನ ಬಿರುಕು ಯಾವುದೇ ಸಮಾಜಕ್ಕೆ ಹಾನಿಕಾರಕವಾಗಿದ್ದು, ಅಂತಹದನ್ನು ಹೇಗೆ ನಿಯಂತ್ರಿಸುವುದು ಎಂಬುದು ನಿರ್ಧಾರದ ಅಂಶವಾಗಿದೆ ಎಂದು ಹೇಳಿದರು.