ಬದಿಯಡ್ಕ: ಯುವತಿಗೆ ದೂರವಾಣಿ ಕರೆಮಾಡಿ ಕಿರುಕುಳ ನೀಡುತ್ತಿದ್ದುದನ್ನು ಪ್ರಶ್ನಿಸಿದ ಸಂಬಂಧಿ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ನಡೆದಿದೆ. ಮಧೂರು ಅರಂತೋಡು ಮೂಲದ ಸಂಜೀವ ಮತ್ತು ಸುಮತಿ ದಂಪತಿಯ ಪುತ್ರ ಸಂದೀಪ್ (26) ಕೊಲೆಯಾದವರು. ಪ್ರಕರಣದ ಆರೋಪಿ ಕೆಎಸ್‍ಇಬಿ ಗುತ್ತಿಗೆ ಕಾರ್ಮಿಕ ಕಜಂಪಾಡಿಯ ಪವನ್ ರಾಜ್ (22)ಗಾಗಿ ಪೋಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಘಟನೆ ನಡೆದ ತಕ್ಷಣ ಆರೋಪಿ ತಲೆಮರೆಸಿಕೊಂಡಿದ್ದು ಬಳಿಕ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಭಾನುವಾರ ಮಧ್ಯಾಹ್ನ 3.30ರ ಸುಮಾರಿಗೆ ಎಣ್ಮಕಜೆ ಕಜಂಪಾಡಿ ಎಂಬಲ್ಲಿ ಯುವಕ ಕೊಲೆಯಾಗಿದ್ದಾನೆ. ಸಂದೀಪ್ ಅವರ ಚಿಕ್ಕಮ್ಮಳ ಪುತ್ರಿ ಯುವತಿಗೆ ಪೋನ್ ಮೂಲಕ ಕರೆಮಾಡಿ ಕಿರುಕುಳ ನೀಡಿದ್ದರ ಬಗ್ಗೆ ಸಂದೀಪ್ ಹಾಗೂ ಯುವತಿಯ ಸಹೋದರ ಶರಣ್ ಆರೋಪಿಗೆ ಎಚ್ಚರಿಕೆ ನೀಡಿದ್ದರು.
ಭಾನುವಾರ ಶರಣ್ ಅವರ ನೂತನ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಬಳಿಕ ಸಂದೀಪ್ ಮತ್ತು ಶರಣ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಇಬ್ಬರನ್ನೂ ತಡೆದ ಆರೋಪಿ ಪವನ್ ರಾಜ್ ಸಂದೀಪ್ ಅವರ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆಗೈದನೆಂದು ಪೋಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್ ಅವರನ್ನು ಮೊದಲು ಕಾಸರಗೋಡು ಆಸ್ಪತ್ರೆಗೆ ದಾಖಲಿಸಿ ನಂತರ ಪರಿಯಾರಂನಲ್ಲಿರುವ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಆತನ ಕತ್ತಿನ ಎರಡೂ ಬದಿಯಲ್ಲಿ ಮಾರಣಾಂತಿಕ ಎರಡು ಗಾಯಗಳಾಗಿದ್ದವು ಎಂದು ಪೋಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಸಂಜೆ ಊರಿಗೆ ತರಲಾಗಿದೆ.