ಪಾಟ್ನಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ವರಿಷ್ಠ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬ ಸದಸ್ಯರನ್ನು ಪಾಟ್ನಾದಲ್ಲಿ ಭೇಟಿ ಮಾಡಿದರು.
ಇಂದು ನಿಗದಿಯಾಗಿರುವ ವಿರೋಧ ಪಕ್ಷದ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲು ಇಂದು ಪಾಟ್ನಾಗೆ ಆಗಮಿಸಿದ ಮಮತಾ ಬ್ಯಾನರ್ಜಿ, ಸಂಸದರಾಗಿರುವ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಲಾಲು ಪ್ರಸಾದ್ ಯಾದವ್ ಅವರನ್ನು ಭೇಟಿಯಾದರು.
ಲಾಲು ಭೇಟಿ ಬಳಿಕ ಮಾತನಾಡಿದ ಮಮತಾ, ಲಾಲು ಜಿ ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬಾ ಖುಷಿಯಾಗಿದೆ. ಅವರು ಒಬ್ಬ ಹಿರಿಯ ನಾಯಕ. ಅವರನ್ನು ನೋಡಿದ ನಂತರ ಬಿಜೆಪಿ ವಿರುದ್ಧ ಹೋರಾಡಲು ಅವರು ಸಾಕಷ್ಟು ಪ್ರಬಲರಾಗಿದ್ದಾರೆ ಅನಿಸಿತು. ನಾವು ಒಂದು ಕುಟುಂಬದಂತೆ ಒಗ್ಗಟ್ಟಿನಿಂದ ಹೋರಾಡಲು ಇಲ್ಲಿಗೆ ಬಂದಿದ್ದೇವೆ ಎಂದರು. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಜಂಟಿ ಕಾರ್ಯತಂತ್ರ ರೂಪಿಸಲು ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ(ಯುನೈಟೆಡ್) ನಾಯಕ ನಿತೀಶ್ ಕುಮಾರ್ ಅವರು ಪಾಟ್ನಾದಲ್ಲಿ ವಿರೋಧ ಪಕ್ಷಗಳ ಸಭೆ ಕರೆದಿದ್ದಾರೆ.