ಮಗುವಿನ ಬಾಯಿಯಿಂದ ಹೊರಡುವ ಮೊದಲ ಶಬ್ಧವನ್ನು ಕೇಳೋದಕ್ಕೆ ಪ್ರತಿಯೊಬ್ಬ ತಂದೆ ತಾಯಿಯೂ ಕೂಡ ಕಾತುರರಾಗಿರುತ್ತಾರೆ. ಹೆಚ್ಚಾಗಿ ಮಕ್ಕಳು ಅಮ್ಮಾ ಎನ್ನುವ ಶಬ್ಧದಿಂದಲೇ ಮಕ್ಕಳು ತಮ್ಮ ಮೊದಲ ಮಾತು ಆರಂಭಿಸುತ್ತಾರೆ. ಇನ್ನೂ ಮಕ್ಕಳು ಬೆಳೆಯುತ್ತಾ ಇದ್ದಂತೆ ಅವರ ತೊದಲು ಮಾತನ್ನು ಕೇಳೋದಕ್ಕೆ ತುಂಬಾನೇ ಖುಷಿಯಾಗುತ್ತದೆ.
ಇನ್ನೂ ಮಕ್ಕಳಿಗೆ ಅವರ ಚಿಕ್ಕ ವಯಸ್ಸಿನಲ್ಲಿಯೇ ಮಾತನಾಡುವ ಕೌಶಲ್ಯಗಳನ್ನು ಕಲಿಸಿ ಕೊಟ್ಟರೆ ದೊಡ್ಡವರಾದ ಮೇಲೆ ಇದು ಅವರಿಗೆ ತುಂಬಾನೇ ಉಪಯೋಗವಾಗುತ್ತದೆ. ಅಷ್ಟಕ್ಕು ಮಕ್ಕಳಲ್ಲಿ ಮಾತನಾಡುವ ಕೌಶಲ್ಯವನ್ನು ವೃದ್ಧಿಸೋದು ಹೇಗೆ ಅನ್ನೋದನ್ನು ತಿಳಿಯೋಣ.ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?
ತಜ್ಞರು ಹೇಳೋ ಪ್ರಕಾರ ಮಕ್ಕಳು ಯಾವಾಗ ಚಿಕ್ಕ-ಪುಟ್ಟ ವಿಷಯಕ್ಕೂ ಅಳೋದಕ್ಕೆ ಶುರು ಮಾಡುತ್ತಾರೆಯೋ ಇದು ಒಂದು ರೀತಿಯ ಸಂವಹನ ಇದ್ದ ಹಾಗೆ. ಆಳುವ ಮೂಲಕ ಅವರು ಹಸಿವಾದರೆ ಅಥವಾ ಅವರಿಗೆ ಕಿರಿಕಿರಿ ಉಂಟಾದರೆ ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಆನಂತರ ಕೊಂಚ ಬೆಳದಂತೆ ಬೊಬ್ಬೆ ಹೊಡೆಯುತ್ತಾರೆ. ಜೊತೆಗೆ ಸನ್ನೆ ಮಾಡುತ್ತಾರೆ. ಇದಾದ ಬಳಿಕ ಒಂದೊಂದೇ ಶಬ್ಧವನ್ನು ಮಾತನಾಡಲು ಶುರು ಮಾಡುತ್ತಾರೆ.
ಸಾಮಾನ್ಯವಾಗಿ ಮಕ್ಕಳು ಒಂದು ವರ್ಷದ ನಂತರವೇ ಮಾತನಾಡೋದಕ್ಕೆ ಶುರು ಮಾಡುತ್ತಾರೆ. ಮೊದಲ 6 ತಿಂಗಳುಗಳಲ್ಲಿ ಮಕ್ಕಳು ತಮ್ಮ ಧ್ವನಿ ಮತ್ತು ದೇಹದೊಂದಿಗೆ ಸಂವಹನ ನಡೆಸಲು ಪ್ರಾರಂಭಿಸುತ್ತಾರೆ. ಇನ್ನೂ ಪ್ರತಿನಿತ್ಯ ನೀವು ಏನು ಮಾಡುತ್ತಿದ್ದೀರಿ ಎಂದು ಅವರಿಗೆ ವಿವರಿಸಿ ಹೇಳಿ. ಉದಾಹರಣೆಗೆ ಬಟ್ಟೆ ಒಗೆಯುವಾಗ, ಮನೆ ಸ್ವಚ್ಛ ಮಾಡುವಾಗ, ಊಟ ಮಾಡುವಾಗ ಇತ್ಯಾದಿ.
ಮೂರು ಸಲ ಪುನರಾವರ್ತಿಸಿ
ನೀವು ಮಕ್ಕಳಿಗೆ ಸಂವಹನ ಕಲಿಸುವಾಗ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಯಾವುದೇ ವಿಚಾರವನ್ನಾದರೂ ಸರಿ ಮೂರು ಸಾರಿ ಹೇಳಿ. ಉದಾಹರಣೆಗೆ ನೀವು ಪುಸ್ತಕವನ್ನು ಹಿಡಿದಿದ್ದರೆ ಇಲ್ಲಿ ನೋಡು ಪುಸ್ತಕ ಎಂದು ಮೂರು ಸಾರಿ ಹೇಳಿ. ಆಗ ಆ ಮಾತುಗಳು ಮಗುವಿನ ತಲೆಯಲ್ಲಿ ಕೂತು ಬಿಡುತ್ತದೆ. ಹಾಗೂ ಈ ಪುಸ್ತಕದ ಮೇಲೆ ಬರೆ ಎಂದು ಹೇಳಿ. ಒಂದು ಪೆನ್ಸಿಲ್ ತೆಗೆದುಕೊಂಡು ನಿಮ್ಮ ಮಗುವಿನ ಕೈ ಹಿಡಿದು ಪುಸ್ತಕದ ಮೇಲೆ ಬರೆಸಿ.
ಮಗುವಿಗೆ ಆಯ್ಕೆ ನೀಡಿ
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಯಾವುದೇ ವಸ್ತುಗಳ ಪರಿಚಯ ಇರೋದಿಲ್ಲ. ನೀವು ಅವರಿಗೆ ಪ್ರತಿಯೊಂದು ವಸ್ತುವಿನ ಹೆಸರು ಹೇಳಿ ಪರಿಚಯ ಮಾಡಿಕೊಡಬೇಕು. ಉದಾಹರಣೆಗೆ ಒಂದು ಬುಟ್ಟಿಯಲ್ಲಿ ಬಾಳೆಹಣ್ಣು ಮತ್ತು ಕಿತ್ತಾಳೆ ಹಣ್ಣನ್ನು ಹಾಕಿ ನಿನಗೆ ಕಿತ್ತಾಳೆ ಬೇಕಾ? ಅಥವಾ ಬಾಳೆಹಣ್ಣು ಬೇಕಾ? ಎಂದು ಮೂರು ಸಾರಿ ಕೇಳಿ. ಈ ರೀತಿ ಮಾಡುತ್ತಿದ್ದರೆ ಅವರಿಗೆ ವಸ್ತುಗಳ ಪರಿಚಯ ಆಗುತ್ತದೆ.
ನಿತ್ಯ ಪುಸ್ತಕಗಳನ್ನು ಓದಿ
ಮಕ್ಕಳ ಸಂವಹನ ಕಲೆಯನ್ನು ಉತ್ತಮಗೊಳಿಸೋದಕ್ಕೆ ಪೋಷಕರು ನಿತ್ಯ ಪುಸ್ತಕವನ್ನು ಓದುವುದು ತುಂಬಾನೇ ಒಳ್ಳೆಯದು. ಕಥೆ ಪುಸ್ತಕವಾದರೂ ಪರವಾಗಿಲ್ಲ. ಅದನ್ನು ಜೋರಾಗಿ ಓದಿತ್ತಿರಿ. ಮಗು ಆ ಕಥೆಯಲ್ಲಿರುವ ಒಂದೊಂದು ಶಬ್ಧವನ್ನು ಗ್ರಹಿಸಿಕೊಳ್ಳುತ್ತದೆ. ನೀವು ನಿತ್ಯ ಪುಸ್ತಕ ಓದುತ್ತಿದ್ದರೆ ಮಗುವಿನ ತಲೆಯಲ್ಲಿ ಶಬ್ಧಕೋಶ ವೃದ್ಧಿಯಾಗುತ್ತದೆ.
ಇದನ್ನೆಲ್ಲಾ ಮಾಡದಿದ್ದರೂ ಕೂಡ ಮಕ್ಕಳು ಮಾತನಾಡುತ್ತಾರೆ ಅಂತ ನೀವು ಅಂದುಕೊಳ್ಳುತ್ತಿರಬಹುದು. ಆದರೆ ಈ ಚಟುವಟಿಕೆಗಳನ್ನು ಮಾಡಿದರೆ ಅವರ ಸಂವಹನ ಕೌಶಲ್ಯ ಉತ್ತಮವಾಗುತ್ತದೆ.