ನವದೆಹಲಿ:ಅಮೆರಿಕದಿಂದ ಖರೀದಿಸಲು ಉದ್ದೇಶಿಸಲಾಗಿರುವ 31 ಎಮ್‌ಕ್ಯೂ-9ಬಿ ಡ್ರೋನ್‌ಗಳ ಬೆಲೆ ಮತ್ತು ಇತರ ಖರೀದಿ ಶರತ್ತುಗಳ ಬಗ್ಗೆ ಸಾಮಾಜಿಕ ಮಾಧ್ಯಮದ ಒಂದು ವರ್ಗವು ಮಾಡುತ್ತಿರುವ ಊಹಾಪೋಹಗಳು ದುರುದ್ದೇಶವನ್ನು ಹೊಂದಿವೆ ಮತ್ತು ಖರೀದಿ ಪ್ರಕ್ರಿಯೆಯ ಹಳಿ ತಪ್ಪಿಸುವ ಉದ್ದೇಶವನ್ನು ಹೊಂದಿವೆ ಎಂದು ರಕ್ಷಣಾ ಸಚಿವಾಲಯ ರವಿವಾರ ಹೇಳಿದೆ.
''ಡ್ರೋನ್‌ಗಳ ಬೆಲೆ ಮತ್ತು ಇತರ ಖರೀದಿ ಶರತ್ತುಗಳಿಗೆ ಸಂಬಂಧಿಸಿ ಸಾಮಾಜಿಕ ಮಾಧ್ಯಮದ ಒಂದು ವರ್ಗದಲ್ಲಿ ಊಹಾಪೋಹದ ವರದಿಗಳು ಕಾಣಿಸಿಕೊಂಡಿವೆ. ಇವುಗಳು ಅನಗತ್ಯವಾಗಿವೆ ಹಾಗೂ ದುರುದ್ದೇಶವನ್ನು ಹೊಂದಿವೆ. ಬೆಲೆ ಮತ್ತು ಖರೀದಿಯ ಶರತ್ತುಗಳನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ. ಹಾಗೂ ಆ ವಿಷಯಗಳಲ್ಲಿ ಮಾತುಕತೆ ನಡೆಯಬೇಕಾಗಿದೆ'' ಎಂದು ಹೇಳಿಕೆಯೊಂದರಲ್ಲಿ ರಕ್ಷಣಾ ಸಚಿವಾಲಯ ತಿಳಿಸಿದೆ.
''ಹಾಗಾಗಿ, ಸುಳ್ಳು ಸುದ್ದಿಯನ್ನು ಹರಡದಂತೆ ಮತ್ತು ಅಪಪ್ರಚಾರ ಮಾಡದಂತೆ ಎಲ್ಲರನ್ನೂ ವಿನಂತಿಸುತ್ತೇವೆ. ಅದು ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಮತ್ತು ಖರೀದಿ ಪ್ರಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತದೆ'' ಎಂದು ಹೇಳಿಕೆ ತಿಳಿಸಿದೆ.