ಕುಂಬಳೆ: ಊರಿನಲ್ಲಿ ಒಂದು ಶಾಲೆ ತೆರೆದರೆ ನಾಲ್ಕು ಸೆರೆಮನೆಯನ್ನು ಮುಚ್ಚಬಹುದು ಎಂಬುದಾಗಿ ಒಂದು ಮಾತಿದೆ. ವಿದ್ಯಾಭ್ಯಾಸ ಎಂಬುದು ಒಬ್ಬ ವ್ಯಕ್ತಿಯನ್ನು ರೂಪಿಸುವ ವಿಚಾರವಾಗಿರಬೇಕು. ಉತ್ತಮ ನಡತೆಯ ವಿದ್ಯಾರ್ಥಿಗಳು ನಮ್ಮ ಮುಂದೆ ಬೆಳೆದು ಬರಬೇಕು ಎಂದು ನಿವೃತ್ತ ಮುಖ್ಯೋಪಾಧ್ಯಾಯರಾದ ಅಶೋಕ್ ಬಾಡೂರು ಹೇಳಿದರು.
ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತರ ಮಕ್ಕಳೊಂದಿಗೆ ನಮ್ಮ ಮಕ್ಕಳನ್ನು ಹೋಲಿಸಿಕೊಂಡು ಅವರಂತೆಯೇ ಬೆಳೆಯಬೇಕೆಂಬ ಚಿಂತನೆಯನ್ನು ಹೆತ್ತವರು ಮಾಡುವುದನ್ನು ಬಿಟ್ಟು ಮಕ್ಕಳಲ್ಲಿ ಅಡಗಿರುವ ಸುಪ್ತವಾದ ಪ್ರತಿಭೆಗೆ ಪೋಷಣೆಯನ್ನು ನೀಡಬೇಕು ಎಂದರು. ಪ್ರತಿಯೊಂದು ಮಗುವಿಗೂ ಪ್ರತ್ಯೇಕ ಗಮನವನ್ನು ಅಧ್ಯಾಪಕರು ನೀಡಿದಾಗ ಎಲ್ಲಾ ಮಕ್ಕಳೂ ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದರು. ಹತ್ತನೇ ತರಗತಿಯಲ್ಲಿ ಎಪ್ಲಸ್ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ನೀಡಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್‍ಯ, ಮುಖ್ಯ ಅಧ್ಯಾಪಿಕೆ ಚಿತ್ರಾಸರಸ್ವತಿ ಮಾತನಾಡಿದರು. ಆಡಳಿತ ಸಮಿತಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಶ್ಯಾಂಭಟ್ ದರ್ಭೆಮಾರ್ಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಿಕೆಯರಾದ ಪ್ರತೀಕ್ಷಾ, ವಿದ್ಯಾ ಪ್ರಾರ್ಥನೆ ಹಾಡಿದರು. ಅಧ್ಯಾಪಕ ಹರಿಪ್ರಸಾದ್ ನಿರೂಪಿಸಿ, ಸೌಮ್ಯಾ ಸ್ವಾಗತಿಸಿ, ಪುಷ್ಪಲತಾ ವಂದಿಸಿದರು.