ಮಕ್ಕಳ ಪ್ರಪಂಚ ಎಂದರೆ ಅದು ಅಮ್ಮಾ. ಅಮ್ಮನ ಹೊರತಾಗಿ ಮಕ್ಕಳ ಪ್ರಪಂಚವನ್ನು ಊಹಿಸೋದಕ್ಕೂ ಸಾಧ್ಯವಿಲ್ಲ. ಯಾಕಂದ್ರೆ ಊಟ ಮಾಡಿಸೋಕೆ ಅಮ್ಮ, ಬಟ್ಟೆ ಒಗೆಯೋದಕ್ಕೆ ಅಮ್ಮ, ಸ್ನಾನ ಮಾಡಿಸೋದು, ಹುಷಾರಿಲ್ಲದಾಗ ಕಾಳಜಿ ಮಾಡುವವಳು ಅಮ್ಮಾ. ಹೀಗೆ ಪ್ರತಿಯೊಂದು ಕೆಲಸಕ್ಕೆ ಮಕ್ಕಳಿಗೆ ಅಮ್ಮಾ ಬೇಕೇ ಬೇಕು. ಅಷ್ಟರ ಮಟ್ಟಿಗೆ ಮಕ್ಕಳು ಅಮ್ಮನ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಇಷ್ಟೊಂದು ಅತಿಯಾಗಿ ಕಾಳಜಿ ಮಾಡಿ ಮಕ್ಕಳನ್ನು ಬೆಳೆಸೋದು ಸರಿಯಲ್ಲ.
ಯಾಕಂದ್ರೆ ಮಕ್ಕಳಿಗೆ ಅಮ್ಮ ಇಲ್ಲದಿದ್ದರೂ ಕೂಡ ಸ್ವತಂತ್ರವಾಗಿ ಬದುಕೋದು ಹೇಗೆ ಅನ್ನೋದನ್ನು ಪೋಷಕರು ಕಲಿಸಬೇಕು. ಚಿಕ್ಕ ವಯಸ್ಸಿನಲ್ಲಿ ಅವರ ಕೆಲಸಗಳನ್ನು ಅವರ ಕೈಯಿಂದಲೇ ಮಾಡಿಸಿ. ಇದರಿಂದ ದೊಡ್ಡವರಾದ ಮೇಲೆ ಅವರಿಗೆ ತುಂಬಾನೇ ಉಪಯೋಗವಾಗುತ್ತದೆ. ಅಷ್ಟಕ್ಕು ಮಕ್ಕಳನ್ನು ಸ್ವತಂತ್ರರಾಗಿ ಬೆಳೆಸೋದು ಹೇಗೆ ಅನ್ನೋದನ್ನು ತಿಳಿಯೋಣ.
1. ಮಕ್ಕಳು ಶಾಲೆಗೆ ನಡೆದುಕೊಂಡೇ ಹೋಗಲಿ!
ಸಾಮಾನ್ಯವಾಗಿ ಪೋಷಕರು ಹತ್ತಿರ ಇರೋ ಶಾಲೆಗಳಿಗೆ ಮಕ್ಕಳನ್ನು ಸೇರಿಸಿರುತ್ತಾರೆ. ಆದರೂ ಕೂಡ ಪೋಷಕರೇ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಾರೆ. ಇನ್ನೂ ವಾಪಾಸ್ಸ್ ಬರುವಾಗಲೂ ಶಾಲೆಯಿಂದ ಕರೆದುಕೊಂಡು ಬರುತ್ತಾರೆ. ಈ ಅಭ್ಯಾಸ ಒಳ್ಳೆಯದಲ್ಲ.
ಮಕ್ಕಳಿಗೆ ಹತ್ತು ವರ್ಷ ತುಂಬಿದ ನಂತರ ಅವರ ಜೊತೆಗೆ ನೀವು ಶಾಲೆಗೆ ಹೋಗುವ ಅಭ್ಯಾಸ ಒಳ್ಳೆಯದಲ್ಲ. ಇತರ ಮಕ್ಕಳೊಂದಿಗೆ ಅವರು ಶಾಲೆಗೆ ಹೋಗಿ ಬರಲಿ. ಇದರಿಂದ ಅವರಲ್ಲಿ ಒಂದು ರೀತಿಯ ದೈರ್ಯ, ಆತ್ಮವಿಶ್ವಾಸ ಹೆಚ್ಚಾಗುತ್ತದೆ.
2. ಟಾಯ್ಲೆಟ್ ಟ್ರೈನಿಂಗ್
ಭಾರತದಲ್ಲಿ ಸಾಮಾನ್ಯವಾಗಿ ಮಕ್ಕಳು ಸಾಧಾರಣ ದೊಡ್ಡವರಾಗುವವರೆಗೂ ಪೋಷಕರೇ ಅವರ ಸ್ವಚ್ಛತಾ ಕೆಲಸಗಳನ್ನು ಮಾಡುತ್ತಾರೆ. ಆದರೆ ವಿದೇಶಗಳಲ್ಲಿ ಮಕ್ಕಳಿಗೆ ಎರಡು ವರ್ಷ ತುಂಬುವಾಗಲೇ ಅವರಿಗೆ ಟಾಯ್ಲೆಟ್ ಟ್ರೈನಿಂಗ್ ನೀಡಲಾಗುತ್ತದೆ. ಇದರಿಂದ ಅವರಿಗೆ ನಾಲ್ಕು ವರ್ಷ ತುಂಬುವಷ್ಟರ ಹೊತ್ತಿನಲ್ಲಿ ಯಾರ ಸಹಾಯವಿಲ್ಲದೇ ಎಲ್ಲಾ ಕೆಲಸವನ್ನು ಅವರೇ ಮಾಡುತ್ತಾರೆ.
3. ಮಕ್ಕಳಿಗೆ ಹೊಡೆಯಬೇಡಿ
ಮಕ್ಕಳಿಗೆ ಹೊಡೆದು, ಬಡಿದು ಬುದ್ಧಿ ಕಲಿಸಬೇಡಿ. ಭಾರತದಲ್ಲಿ ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳು ತಪ್ಪು ಮಾಡಿದಾಗ ಹೊಡೆಯುತ್ತಾರೆ. ಇದು ಸರಿಯಲ್ಲ. ಯಾಕಂದ್ರೆ ಇದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಯಾವುದೇ ವಿಚಾರ ಇದ್ದರೂ ಕೂಡ ಅವರಿಗೆ ಅರ್ಥವಾಗುವಂತೆ ಸೂಕ್ಷ್ಮವಾಗಿ ತಿಳಿ ಹೇಳಿ. ಇದರಿಂದ ಅವರ ಯೋಚನಾ ಸಾಮರ್ಥ್ಯ ಕೂಡ ಉತ್ತಮವಾಗುತ್ತದೆ.
4. ಮಕ್ಕಳಿಗೆ ಜವಾಬ್ದಾರಿಯನ್ನು ನೀಡಿ
ಮಕ್ಕಳ ಪ್ರತಿಯೊಂದು ಕೆಲಸವನ್ನು ಪೋಷಕರು ಮಾಡುವುದು ಸರಿಯಲ್ಲ. ಬದಲಾಗಿ ಮಕ್ಕಳು ಚಿಕ್ಕವರಿರುವಾಗಲೇ ಸಣ್ಣಪುಟ್ಟ ಕೆಲಸಗಳನ್ನು ಅವರೇ ಮಾಡಲಿ. ಅವರಾಗಿಯೇ ಸ್ನಾನ ಮಾಡುವುದು, ತಿಂದ ತಟ್ಟೆ ತೊಳೆಯುವುದು, ಬಟ್ಟೆ ಮಾಡಚುವುದು, ಪುಸ್ತಕ ಜೋಡಿಸುವುದು. ಅಮ್ಮ-ಅಪ್ಪನಿಗೆ ಸಣ್ಣಪುಟ್ಟ ಸಹಾಯ ಮಾಡುವುದು ಇತ್ಯಾದಿ. ಇದರಿಂದ ಅವರು ದೊಡ್ಡವರಾದ ಮೇಲೆ ಸ್ವತಂತ್ರವಾಗಿ ಬದುಕೋದಕ್ಕೆ ಸಹಾಯವಾಗುತ್ತದೆ.
5. ಆಯ್ಕೆಯನ್ನು ಅವರಿಗೆ ಬಿಟ್ಟು ಬಿಡಿ ಮಕ್ಕಳಿಗೂ ಅವರದ್ದೇ ಆದ ಆಯ್ಕೆಗಳು ಇರುತ್ತದೆ. ಆದರೆ ಪೋಷಕರು ಅದ್ಯಾವುದಕ್ಕೂ ಅವಕಾಶ ನೀಡೋದೇ ಇಲ್ಲ. ಅವರು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಪೋಷಕರೇ ಆಯ್ಕೆ ಮಾಡುತ್ತಾರೆ. ಮಕ್ಕಳು ಯಾವ ಬಟ್ಟೆ ಹಾಕಬೇಕು, ಯಾವ ಆಟ ಆಡಬೇಕು, ವಿಶೇಷ ಕೌಶಲ್ಯಗಳನ್ನು ಕಲಿಯುವಾಗಲೂ ಪೋಷಕರು ಇಷ್ಟ ಪಟ್ಟದ್ದನ್ನೇ ಮಕ್ಕಳು ಕಲಿಯಬೇಕು. ಇದು ಪೋಷಕರು ಮಾಡುವ ದೊಡ್ಡ ತಪ್ಪು. ಮಕ್ಕಳ ಆಯ್ಕೆಗೂ ಅವಕಾಶ ನೀಡಬೇಕು.
6. ಸಮಸ್ಯೆಗಳನ್ನು ಬಗೆಹರಿಸೋದು ಹೇಗೆ ಎಂದು ಹೇಳಿಕೊಡಿ ಇತ್ತೀಚಿನ ಪೋಷಕರಂತೂ ಮಕ್ಕಳನ್ನು ತಲೆಯ ಮೇಲೆ ಹೊತ್ತು ಮೆರೆಸುತ್ತಾರೆ. ಅವರಿಗೆ ಒಂದು ಇರುವೆ ಕಚ್ಚೋದಕ್ಕೂ ಅವಕಾಶ ಕೊಡೋದಿಲ್ಲ. ಸಮಸ್ಯೆಗಳು ಅವರ ಹತ್ತಿರ ಬರೋ ಮುನ್ನವೇ ಅದನ್ನು ಪೋಷಕರು ಪರಿಹರಿಸುತ್ತಾರೆ. ಈ ರೀತಿ ಮಾಡುವುದು ತಪ್ಪು ಮಕ್ಕಳು ಸಮಸ್ಯೆಗಳಿಗೆ ತೆರೆದುಕೊಳ್ಳಬೇಕು. ಹಾಗೂ ಅದನ್ನು ಪರಿಹರಿಸೋದು ಹೇಗೆ ಎಂಬುವುದನ್ನು ಮಕ್ಕಳಿಗೆ ಕಲಿಸಿ.
7. ಸೋತಾಗ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿ ಮನುಷ್ಯನ ಜೀವನದಲ್ಲಿ ಸೋಲು ಹಾಗೂ ಗೆಲುವು ಸಾಮಾನ್ಯ. ಪೋಷಕರು, ಯಾವಾಗಲೂ ಮಕ್ಕಳು ಗೆಲ್ಲಬೇಕು ಎಂದು ಬಯಸುತ್ತಾರೆ ಹೊರತು ಸೋಲೋದು ಅವರಿಗೆ ಇಷ್ಟ ಇರೋದಿಲ್ಲ. ಮಕ್ಕಳು ಸೋತು ಮನೆಗೆ ಬಂದಾಗ ನೀವು ನಿರಾಶರಾಗಿ, ಅವರನ್ನೂ ನಿರಾಸೆಗೊಳ್ಳುವಂತೆ ಮಾಡಬೇಡಿ. ಸೋತವನಿಗೆ ಮತ್ತೆ ಗೆಲ್ಲುವ ಶಕ್ತಿ ತುಂಬಿರಿ. ಮಕ್ಕಳ ಬೆನ್ನಿಗೆ ನಿಂತು ಪ್ರೋತ್ಸಾಹ ನೀಡಿ. ಮಕ್ಕಳು ಚಿಕ್ಕವರಿರಬೇಕಾದರೆ ಈ ಎಲ್ಲಾ ವಿಚಾರಗಳಲ್ಲಿ ಅವರಿಗೆ ಸರಿಯಾದ ತರಬೇತಿ ನೀಡಿದರೆ ದೊಡ್ಡವರಾದ ಮೇಲೆ ಯಾರ ನೆರವಿಲ್ಲದೆಯೂ ಅವರು ಸ್ವತಂತ್ರವಾಗಿ ಬದುಕೋದಕ್ಕೆ ಸಾಧ್ಯವಾಗುತ್ತದೆ.