ನವದೆಹಲಿ: ಸಿಗ್ನಲಿಂಗ್ ಕಾರ್ಯವಿಧಾನಗಳಲ್ಲಿ ಅಳವಡಿಸಿರುವ ಸುರಕ್ಷತಾ ವ್ಯವಸ್ಥೆಯನ್ನು ತಕ್ಷಣ ಪರಿಶೀಲಿಸುವಂತೆ ಭಾರತೀಯ ರೈಲ್ವೆಯು ತನ್ನ 19 ವಲಯ ಕಚೇರಿಗಳಿಗೆ ಸೂಚಿಸಿದೆ.
ಬಾಲೇಶ್ವರ ರೈಲು ದುರಂತದ ಕುರಿತು ನಡೆದ ಪ್ರಾಥಮಿಕ ಹಂತದ ತನಿಖೆಯಲ್ಲಿ ಮೂರು ರೈಲುಗಳ ಅಪಘಾತಕ್ಕೆ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ದೋಷ ಇದ್ದದ್ದು ಕಂಡು ಬಂದಿತ್ತು.
'ಎಲ್ಲಾ ರಿಲೇ ಕೊಠಡಿಗಳು, ಸಿಗ್ನಲಿಂಗ್ ಪರಿಕರಗಳನ್ನು ಇಟ್ಟಿರುವ ಕೊಠಡಿ, ಅವುಗಳ ಡಬಲ್ ಲಾಕಿಂಗ್ ವ್ಯವಸ್ಥೆಯನ್ನು ಶೇಕಡಾ ನೂರರಷ್ಟು ಖಾತರಿಯೊಂದಿಗೆ ಪರಿಶೀಲಿಸಬೇಕು. ಎಲ್ಲ ನಿಲ್ದಾಣಗಳಲ್ಲಿರುವ ರಿಲೇ ಕೊಠಡಿಗಳ ಬಾಗಿಲು ತೆರೆಯಲು ಮತ್ತು ಮುಚ್ಚಲು ಡೇಟಾ ಲಾಗಿಂಗ್ ಮತ್ತು ಎಸ್‌ಎಂಎಸ್ ಅಲರ್ಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು. ಕ್ಷೇತ್ರಕಾರ್ಯದಲ್ಲಿರುವ ಸಿಬ್ಬಂದಿಯು ನಿಯಮ ಮತ್ತು ಮಾರ್ಗಸೂಚಿಗಳ ಪ್ರಕಾರ, ಸಿಗ್ನಲಿಂಗ್ ಮತ್ತು ಟೆಲಿ ಕಮ್ಯುನಿಕೇಷನ್ ಪರಿಕರಗಳ ಸಂಪರ್ಕ ಮತ್ತು ಕಡಿತದ ವ್ಯವಸ್ಥೆಯನ್ನು ಪರಿಶೀಲಿಸಬೇಕು' ಎಂದೂ ಮಂಡಳಿಯು ಪತ್ರದಲ್ಲಿ ನಿರ್ದೇಶನ ನೀಡಿದೆ.
ಈ ವರ್ಷದ ಆರಂಭದಲ್ಲೇ ನೈರುತ್ಯ ರೈಲ್ವೆಯ ಉನ್ನತ ಅಧಿಕಾರಿಯೊಬ್ಬರು, ಇಂಟರ್ ಲಾಕಿಂಗ್ ವ್ಯವಸ್ಥೆಯಲ್ಲಿನ ದೋಷಗಳನ್ನು ಪತ್ತೆ ಹಚ್ಚಿ, ಈ ದೋಷಗಳನ್ನು ಸರಿಪಡಿಸದಿದ್ದರೆ ಅನಾಹುತ ಉಂಟಾಗುವ ಎಚ್ಚರಿಕೆಯನ್ನು ನೀಡಿದ್ದರು.
'ಕ್ಷೇತ್ರಕಾರ್ಯದಲ್ಲಿರುವ ಸಿಬ್ಬಂದಿಯು ಸಿಗ್ನಲ್‌ಗಳ ದೋಷವನ್ನು ಸರಿಪಡಿಸಲು ಸೂಕ್ತವಾದ ಕಾರ್ಯವಿಧಾನವನ್ನು ಅನುಸರಿಸದೇ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್ ವ್ಯವಸ್ಥೆಯನ್ನು ಬೈಪಾಸ್ ಮಾಡುತ್ತಿದ್ದಾರೆ' ಎಂದೂ ಅಧಿಕಾರಿಯು ಭಾರತೀಯ ರೈಲ್ವೆಗೆ ಮಾಹಿತಿ ನೀಡಿದ್ದರು.
ಮೈಸೂರು ವಿಭಾಗದಲ್ಲಿನ ಹೊಸದುರ್ಗ ರಸ್ತೆಯ ರೈಲ್ವೆ ನಿಲ್ದಾಣದಲ್ಲಿ ಇದೇ ವರ್ಷ ಫೆ. 8ರಂದು ಬೆಂಗಳೂರು-ನವದೆಹಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ನ ಲೊಕೊಮೊಟಿವ್ ಪೈಲಟ್ ಎಚ್ಚರಿಕೆ ನೀಡಿದ್ದರಿಂದ ಸಂಭವಿಸಬಹುದಾಗಿದ್ದ ದೊಡ್ಡ ರೈಲು ಅಪಘಾತವನ್ನು ತಪ್ಪಿಸಿದ್ದನ್ನೂ ಕೂಡಾ ಅಧಿಕಾರಿಯು ಉಲ್ಲೇಖಿಸಿದ್ದರು.