ನವದೆಹಲಿ: ಕೋವಿನ್ ಪೋರ್ಟಲ್‌ನ ದತ್ತಾಂಶ ಒಳಗೊಂಡಂತೆ ವಿವಿಧ ಹಂತಗಳಲ್ಲಿ ದತ್ತಾಂಶ ಸೋರಿಕೆಯ ಬೆಳವಣಿಗೆ ಕುರಿತು ವಿವಿಧ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದತ್ತಾಂಶಗಳ ರಕ್ಷಣೆಗೆ ಪೂರಕವಾದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸೈಬರ್ ಭದ್ರತೆ ವಿಭಾಗದ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಶಿವಸೇನೆ ಸಂಸದ ಪ್ರತಾಪರಾವ್ ಜಾಧವ್ ಅಧ್ಯಕ್ಷತೆಯ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಕುರಿತ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳನ್ನು ಕರೆಸಿ, ದತ್ತಾಂಶ ಭದ್ರತೆ ಮತ್ತು ಖಾಸಗಿತನ ರಕ್ಷಣೆ ಕುರಿತಂತೆಯೂ ಮಾಹಿತಿ ಪಡೆದರು.
ಈ ಚರ್ಚೆ ಸಕಾರಾತ್ಮಕವಾಗಿತ್ತು. ಕಾಂಗ್ರೆಸ್‌ನ ಕಾರ್ತಿ ಚಿದಂಬರಂ, ತೃಣಮೂಲ ಕಾಂಗ್ರೆಸ್‌ನ ಜವಹರ್ ಸಿರ್ಕಾರ್ ಅವರು ಪ್ರಮುಖವಾಗಿ ಕೋವಿನ್ ದತ್ತಾಂಶ ಸೋರಿಕೆ ಕುರಿತು ಆತಂಕ ವ್ಯಕ್ತಪಡಿಸಿದ್ದು, ಬಿಜೆಪಿಯ ತೇಜಸ್ವಿ ಸೂರ್ಯ ಮತ್ತು ನಿಶಿಕಾಂತ್ ದುಬೆ ಅವರೂ ವಿಷಯ ಕುರಿತು ಮಾತನಾಡಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಸೆರ್ಟ್-ಇನ್ ಸಂಸ್ಥೆಯ ಅಧಿಕಾರಿಯು, ಭಾರತದಲ್ಲಿ ಸೈಬರ್ ಭದ್ರತೆಗೆ ಪೂರಕವಾದ ವ್ಯವಸ್ಥೆ ಇದೆ. ಎದುರಾಗಬಹುದಾದ ಯಾವುದೇ ಅಪಾಯ ಎದುರಿಸಲು ಸೂಕ್ತವಾದುದಾಗಿದೆ ಎಂದು ತಿಳಿಸಿದರು. ಹೆಚ್ಚಿನ ಭದ್ರತೆಗೆ ಒತ್ತು ನೀಡುವಂತೆ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಸಂಸದರು ಸಲಹೆ ಮಾಡಿದರು.
ಪೊಲೀಸರಿಗೆ ದೂರು: ದತ್ತಾಂಶ ಸೋರಿಕೆ ಕುರಿತಂತೆ ಸಂಸದರು ಚರ್ಚೆ ನಡೆಸಿರುವಂತೆಯೇ, ರಾಜ್ಯಸಭೆಯ ಸದಸ್ಯ ಡೆರ್ರೆಕ್ ಒ ಬ್ರಿಯಾನ್ ಅವರು, ಗೋಪ್ಯ ಮತ್ತು ಸೂಕ್ಷ್ಮವಾದ ದತ್ತಾಂಶಗಳನ್ನು ಅನಧಿಕೃತವಾಗಿ ಸೋರಿಕೆ ಮಾಡಲಾಗಿದೆ ಎಂದು ಕೋಲ್ಕತ್ತ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ಜನ್ಮದಿನಾಂಕ, ಪಾಸ್‌ಪೋರ್ಟ್ ವಿವರ, ಮೊಬೈಲ್ ಸಂಖ್ಯೆ ಇನ್ನಿತರ ವಿವರಗಳು ಟೆಲಿಗ್ರಾಂ ಖಾತೆಯ ಮೂಲಕ ಲಭ್ಯವಿದೆ ಎಂಬ ಅಂಶ ಜೂನ್ 12ರಂದು ನನ್ನ ಅರಿವಿಗೆ ಬಂದಿದೆ ಎಂದು ತಿಳಿಸಿದ್ದಾರೆ.