ನವದೆಹಲಿ: ಡಿಜಿಟಲ್ ಬಳಕೆದಾರರ ಮೇಲೆ ನಕಾರಾತ್ಮಕ ಪರಿಣಾಮ ಆಗದಂತೆ ಕೇಂದ್ರ ಸರ್ಕಾರ ಸರ್ಕಾರ ಕೃತಕ ಬುದ್ಧಿಮತ್ತೆ (ಎ.ಐ) ಅನ್ನು ನಿಯಂತ್ರಿಸಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಶುಕ್ರವಾರ ಹೇಳಿದರು.
'ಕೃತಕ ಬುದ್ಧಿಮತ್ತೆಯನ್ನು ಕೆಟ್ಟದ್ದಕ್ಕಾಗಿ ಅಲ್ಲ, ಒಳ್ಳೆಯದಕ್ಕೆ ಬಳಕೆಯಾಗಲಿದೆ ಎಂದೂ ಸರ್ಕಾರ ಖಾತರಿ ಪಡಿಸಿಕೊಳ್ಳಲಿದೆ' ಎಂದರು.
ವೆಬ್3 ವೇದಿಕೆಯನ್ನು ಒಳಗೊಂಡಂತೆ ತಾಂತ್ರಿಕ ಮತ್ತು ಡಿಜಿಟಲ್ ಆಧಾರಿತ ಯಾವುದೇ ಕ್ಷೇತ್ರಕ್ಕೂ ಇದೇ ಮಾನದಂಡವನ್ನು ಸರ್ಕಾರ ಅನುಸರಿಸಲಿದೆ ಎಂದು ತಿಳಿಸಿದರು.
ವೆಬ್ 3.0 ಎಂದೂ ಗುರುತಿಸುವ 'ವೆಬ್3' ಇಂಟರ್‌ನೆಟ್‌ನ ಹೊಸ ಸಂಪರ್ಕ ವೇದಿಕೆಯಾಗಿದೆ. ವಿಕೇಂದ್ರೀಕರಣ, ಬ್ಲಾಕ್‌ಚೇನ್ ಟೆಕ್ನಾಲಜಿ ಮತ್ತು ಟೋಕನ್ ಆಧರಿತ ಅರ್ಥಶಾಸ್ತ್ರದ ಕಲ್ಪನೆಗಳನ್ನು ಇದು ಒಳಗೊಂಡಿದೆ.
'ಇಂಟರ್‌ನೆಟ್‌ನಲ್ಲಿ ಇಂದು ದ್ವೇಷ ಮತ್ತು ಅಪರಾಧದ ಮನಸ್ಥಿತಿ ಹೆಚ್ಚಾಗಿದೆ. ಡಿಜಿಟಲ್ ಬಳಕೆದಾರರಿಗೆ ಕೆಡುಕಾಗಬೇಕು ಎಂದು ನಾವು ಬಯಸುವುದಿಲ್ಲ. ಬಳಕೆದಾರರಿಕೆ ಕೆಡುಕಾಗಲಿದೆ ಎನ್ನಲಾಗುವ ಎ.ಐ ಅಥವಾ ಸಂಬಂಧಿತ ಕಾರ್ಯಕ್ರಮಗಳ ನಿರ್ವಹಣೆಗೆ ಭಾರತದಲ್ಲಿ ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಸಚಿವರು ಹೇಳಿದರು.
ಎ.ಐ ಅನ್ವೇಷಣೆಯು ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ, 'ಕಳೆದ ಕೆಲ ವರ್ಷಗಳಲ್ಲಿ ಎ.ಐನಿಂದ 1 ಕೋಟಿಗೂ ಅಧಿಕ ಉದ್ಯೋಗಗಳು ಸೃಷ್ಟಿಯಾಗಿವೆ. ಐದು ವರ್ಷಗಳ ಬಳಿಕ ಇದು ಮಾನವ ಕಾರ್ಯಪಡೆಯನ್ನು ಅತಿಕ್ರಮಿಸುವ ಸಾಧ್ಯತೆಗಳು ಇವೆ. ಸದ್ಯ, ಎ.ಐ ನಿರ್ದಿಷ್ಟ ಉದ್ದೇಶಗಳಿಗಷ್ಟೇ ಬಳಕೆಯಾಗುತ್ತಿದೆ. ಇದು, ದಕ್ಷತೆಯನ್ನು ಹೆಚ್ಚಿಸಲಿದೆ. ಬಹುತೇಕ ಪುನರಾವರ್ತಿತ ಹಾಗೂ ಯಾಂತ್ರಿಕ ಕಾರ್ಯಶೈಲಿಯ ಉದ್ಯೋಗಗಳಲ್ಲಿ ಕ್ರಮೇಣ ಇದು ಬಳಕೆಯಾಗಬಹುದು' ಎಂದರು.
ಚಾಟ್ ಜಿಪಿಟಿ ಅನ್ನು ಅನ್ವೇಷಿಸಿರುವ ಓಪನ್ ಎಐ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಯಾಮ್ ಅಲ್ಟ್‌ಮನ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದು, ಕೃತಕ ಬುದ್ಧಿಮತ್ತೆ (ಎಐ) ವಿವಿಧ ಆಯಾಮಗಳ ಕುರಿತು ಚರ್ಚಿಸಿದರು.