ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ(PM Narendra Modi) ಅವರು ಇಂದು ಶುಕ್ರವಾರ ದೆಹಲಿ ವಿಶ್ವ ವಿದ್ಯಾಲಯಕ್ಕೆ ಮೆಟ್ರೊದಲ್ಲಿ(Delhi metro) ಪ್ರಯಾಣಿಸಿದರು. ದೆಹಲಿ ವಿಶ್ವ ವಿದ್ಯಾಲಯದ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.
ಬಿಗಿ ಭದ್ರತೆ ಸಿದ್ಧತೆಗಳ ನಡುವೆ ಪ್ರಧಾನಿ ಮೋದಿ ಮೆಟ್ರೋ ನಿಲ್ದಾಣದಲ್ಲಿ ಇತರ ಪ್ರಯಾಣಿಕರಂತೆ ಕಾರ್ಡು ಉಜ್ಜಿ ರೈಲು ಹತ್ತಿದರು. ದೆಹಲಿ ವಿಶ್ವವಿದ್ಯಾನಲಯದ ಶತಮಾನೋತ್ಸವ ಆಚರಣೆಗೆ ತೆರಳುತ್ತಿರುವಾಗ ಪ್ರಧಾನಿಯವರು ತಮ್ಮ ಸಹ ಪ್ರಯಾಣಿಕರೊಂದಿಗೆ ಸಂವಾದ ನಡೆಸುತ್ತಿರುವುದನ್ನು ಕಾಣಬಹುದು.
ದೆಹಲಿ ಮೆಟ್ರೋದಲ್ಲಿ ಪ್ರಧಾನ ಮಂತ್ರಿಯವರು ಇತರ ಪ್ರಯಾಣಿಕರಂತೆ ಕುಳಿತು ಸಹ ಪ್ರಯಾಣಿಕರ ಜೊತೆ ಮಾತನಾಡುತ್ತಿರುವ ದೃಶ್ಯ ಸಾಮಾಜಿಕ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿ ಯೂನಿವರ್ಸಿಟಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರ ಭೇಟಿಯನ್ನು ಗಮನದಲ್ಲಿಟ್ಟುಕೊಂಡು 1,000 ಕ್ಕೂ ಹೆಚ್ಚು ಅರೆಸೇನಾಪಡೆ ಮತ್ತು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ ಮೂರು ಹಂತದ ಭದ್ರತಾ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಇಂದು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಧಾನಿ ಮೋದಿ ಅವರು ಮೂರು ಕಟ್ಟಡಗಳ ಶಂಕುಸ್ಥಾಪನೆ ಮತ್ತು ಕಾಫಿ ಟೇಬಲ್ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಟ್ಟಡಗಳು ತಂತ್ರಜ್ಞಾನದ ಅಧ್ಯಾಪಕರಿಗೆ, ಕಂಪ್ಯೂಟರ್ ಸೆಂಟರ್ ಮತ್ತು ಶೈಕ್ಷಣಿಕ ಬ್ಲಾಕ್ ಆಗಿದೆ. ಇವುಗಳು ಅತ್ಯಾಧುನಿಕ ಮೂಲಸೌಕರ್ಯದೊಂದಿಗೆ 7+1 ಅಂತಸ್ತಿನದ್ದಾಗಿರುತ್ತವೆ.
ಸಮಾರಂಭಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅತಿಥಿಯಾಗಿ ಆಗಮಿಸಲಿದ್ದಾರೆ. ಪಿಟಿಐ ಜೊತೆ ಮಾತನಾಡಿದ ಡಿಯು ಸೌತ್ ಕ್ಯಾಂಪಸ್ ನಿರ್ದೇಶಕ ಪ್ರಕಾಶ್ ಸಿಂಗ್, ಲೋಗೋ ಪುಸ್ತಕ ಸೇರಿದಂತೆ ಮೂರು ಕಾಫಿ ಟೇಬಲ್ ಪುಸ್ತಕಗಳನ್ನು ಪ್ರಧಾನಿ ಬಿಡುಗಡೆ ಮಾಡಲಿದ್ದಾರೆ.
ಪ್ರಧಾನಿ ಅವರು ಶಂಕುಸ್ಥಾಪನೆ ಮಾಡುವ ಮೂರು ಕಟ್ಟಡಗಳೆಂದರೆ ಕಂಪ್ಯೂಟರ್ ಸೆಂಟರ್ ಮತ್ತು ತಂತ್ರಜ್ಞಾನ ವಿಭಾಗ (ನಾರ್ತ್ ಕ್ಯಾಂಪಸ್) ಮತ್ತು ಮಾರಿಸ್ ನಗರದಲ್ಲಿನ ಶೈಕ್ಷಣಿಕ ಬ್ಲಾಕ್. ಈ ಕಟ್ಟಡಗಳು ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ವಿವಿ ಕುಲಪತಿ ಯೋಗೇಶ್ ಸಿಂಗ್ ತಿಳಿಸಿದರು.