ಕಾಸರಗೋಡು: ನೀಲೇಶ್ವರ ನಗರಸಭೆಯನ್ನು ತ್ಯಾಜ್ಯಮುಕ್ತ ನಗರಸಭೆ ಎಂದು ಘೋಷಿಸಲಾಗಿದ್ದು, ನಗರಸಭೆಯ ಅನೆಕ್ಸ್ ಸಭಾಂಗಣದಲ್ಲಿ ನಡೆದ ಸಮಾರಂಬದಲ್ಲಿ ಶಾಸಕ ಎಂ. ರಾಜಗೋಪಾಲನ್‍ಕಿ ಗೋಷಣೆ ನೆರವೇರಿಸಿದರು.
ನಗರಸಭಾ ಅಧ್ಯಕ್ಷೆ ಟಿ.ವಿ ಶಾಂತಾ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭ ಮಾತನಾಡಿದರ ಅವರು ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವವರು ಮತ್ತು ಸಾರ್ವಜನಿಕ ಸ್ಥಳಗಳು ಮತ್ತು ಜಲಾನಯನ ಪ್ರದೇಶಗಳಿಗೆ ನಿರ್ಲಕ್ಷವಾಗಿ ತ್ಯಾಜ್ಯ ಎಸೆಯುವವರ ವಿರುದ್ಧ ನಗರಸಭೆ ಭಾರೀ ದಂಡ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ಒಂದು ತಿಂಗಳಲ್ಲಿ ನಗರಸಭೆ 100 ಸಾವಿರದವರೆಗೆ ದಂಡ ವಿಧಿಸಿದೆ. ಮುಂಗಾರು ಪೂರ್ವ ಸ್ವಚ್ಛತೆಯ ಅಂಗವಾಗಿ ಪ್ರಮುಖ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಹರಿಯಲು ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗಿದೆ. ಉದ್ಯೋಗ ಖಾತ್ರಿ ಯೋಜನೆಗೆ ಸೇರ್ಪಡೆಗೊಳಿಸಿ ವಾರ್ಡ್‍ಗಳಲ್ಲಿನ ಚರಂಡಿಗಳನ್ನು ತೆರವುಗೊಳಿಸಲಾಗಿದೆ. ಕಸ ಮುಕ್ತ ಕೇರಳವನ್ನು ಸಾಕಾರಗೊಳಿಸುವ ಅಂಗವಾಗಿ ಹಸಿರು ಕ್ರಿಯಾ ಸೇನೆ ಸದಸ್ಯರು, ಕುಟುಂಬಶ್ರೀ, ರಾಜಕೀಯ ಪಕ್ಷದ ಕಾರ್ಯಕರ್ತರು, ಕ್ಲಬ್ ಪದಾಧಿಕಾರಿಗಳು,ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ಇತರೆ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಸಾರ್ವಜನಿಕ ಪ್ರದೇಶಗಳಿಂದ ಸಂಗ್ರಹಿಸಿಡಲಾದ ಒಂದು ಟನ್ ಕಸವನ್ನು ಕ್ಲೀನ್ ಕೇರಳ ಕಂಪನಿಗೆ ಹಸ್ತಾಂತರಿಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಕುಮಾರ್ ಉಪಸ್ಥಿತರಿದ್ದರು. ಆರೋಗ್ಯ ಅಧೀಕ್ಷಕ ಟಿ.ಅಜಿತ್ ಧನ್ಯವಾದವಿತ್ತರು.