ಬದಿಯಡ್ಕ : ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿಯಲ್ಲಿ ಯುವ ವೈದ್ಯೆ ನೇಣಿಗೆ ಶರಣಾಗಿದ್ದು, ವೈದ್ಯೆ ಬರೆದಿಟ್ಟಿದ್ದಾರೆನ್ನಲಾದ ಡೆತ್ ನೋಟ್ ಪೊಲೀಸರಿಗೆ ಲಭಿಸಿದೆ. ಇಲ್ಲಿನ ನಿವಾಸಿ ಕ್ಯಾಂಪ್ಕೋ ನಿವೃತ್ತ ಉದ್ಯೋಗಿ ಗೋಪಾಲಕೃಷ್ಣ ಭಟ್ ಅವರ ಪುತ್ರಿ ಡಾ. ಪಲ್ಲವಿ ಜಿ.ಕೆ(25)ಮೃತಪಟ್ಟ ಯುವತಿ.
ಸೋಮವಾರ ರಾತ್ರಿ ಆಹಾರ ಸೇವಿಸಿ ಕೊಠಡಿಗೆ ನಿದ್ರಿಸಲು ತೆರಳಿದ್ದ ಪಲ್ಲವಿ, ಮಂಗಳವಾರ ಬೆಳಗ್ಗೆ ಬಹಳ ಹೊತ್ತಿನ ವರೆಗೂ ಎದ್ದೇಳದಿರುವುದರಿಂದ ಬಾಗಿಲು ತೆರೆದು ನೋಡಿದಾಗ ಕಿಟಿಕಿ ಸರಳಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಧಾರವಾಡದ ಎಸ್.ಡಿ.ಎಂ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪೂರ್ತಿಗೊಳಿಸಿರುವ ಪಲ್ಲವಿ, ರೂರಲ್ ಸರ್ವೀಸ್ ಅಂಗವಾಗಿ ಸುಳ್ಯದ ತಾಲೂಕು ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದರು. ಈ ಮಧ್ಯೆ ಎಂಡಿ ಕೋರ್ಸ್‍ಗಾಗಿ ರಜೆಯಲ್ಲಿ ತೆರಳಿದ್ದ ಇವರು ಪರೀಕ್ಷೆ ಮುಗಿಸಿ ಮತತೆ ಕರ್ತವ್ಯಕ್ಕೆ ಹಾಜರಾಗಲು ಆಸ್ಪತ್ರೆಗೆ ತೆರಳಿದಾಗ ಪಲ್ಲವಿ ಸಏರಿದಂತೆ ಇತರ ನಾಲ್ಕು ಮಂದಿ ವೈದ್ಯರನ್ನು ಅಲ್ಲಿ ನೇಮಕಮಾಡಿಕೊಂಡಿರಲಿಲ್ಲ. ಇದರಿಂದ ಮನನೊಂದು ಮನೆಗೆ ವಾಪಸಾಗಿದ್ದ ಇವರು ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಬದಿಯಡ್ಕ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.