ಬದಿಯಡ್ಕ: ನಮ್ಮ ಜೀವನಕ್ರಮವು ಆರೋಗ್ಯದಮೇಲೆ ಪರಿಣಾಮವನ್ನು ಬೀರುತ್ತದೆ. ರಕ್ತದಾನವೆಂಬುದು ವಿಶೇಷವಾದ ಸೇವೆಯಾಗಿದೆ. ನಿರಂತರ ರಕ್ತದಾನವನ್ನು ಮಾಡುವುದರಿಂದ ಆರೋಗ್ಯವಂತರಾಗಿ ಬಾಳಲು ಸಾಧ್ಯವಿದೆ. ಹೃದಯದ ಮೇಲೆ ಬೀಳುವ ಒತ್ತಡವನ್ನು ಕಡಿಮೆಮಾಡುತ್ತದೆ. ವಿಶಿಷ್ಟವಾದ ಸೇವಾಕಾರ್ಯದ ಮೂಲಕ ಒಂದು ಜೀವವನ್ನು ಉಳಿಸಲು ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸಿರುವುದು ಶ್ಲಾಘನೀಯ ಎಂದು ಪ್ರಸಿದ್ಧ ಆಯುರ್ವೇದ ತಜ್ಞ ವೈದ್ಯ ಡಾ. ಜಯಗೋವಿಂದ ಉಕ್ಕಿನಡ್ಕ ಅಭಿಪ್ರಾಯಪಟ್ಟರು.
ರೋಟರಿ ಬದಿಯಡ್ಕ ಇವರ ನೇತೃತ್ವದಲ್ಲಿ ಪೆರಡಾಲ ನವಜೀವನ ಶಾಲೆಯ ಸಭಾಂಗಣದಲ್ಲಿ ಭಾನುವಾರ ಜರಗಿದ ರಕ್ತದಾನ ಶಿಬಿರಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
ಶಾಲೆ ಕಾಲೇಜುಗಳಲ್ಲಿ ಮಕ್ಕಳಿಗೆ ರಕ್ತದಾನದ ಬಗ್ಗೆ ತಿಳುವಳಿಕಾ ತರಗತಿಗಳು ನಡೆಯಬೇಕು. ಬಾಲ್ಯದಿಂದಲೇ ಸೇವಾಕಾರ್ಯಗಳಲ್ಲಿ ತೊಡಗಿಕೊಳ್ಳುವಂತಹ ಮನೋಭಾವವನ್ನು ಮಕ್ಕಳಲ್ಲಿ ರೂಢಿಸಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು. ಯುವಕರು, ಯುವತಿಯರು ರಕ್ತದಾನಕ್ಕೆ ಮುಂದೆ ಬರಬೇಕು. ರಕ್ತದಾನವನ್ನು ಮಾಡುವುದರಿಂದ ನಮ್ಮ ಆರೋಗ್ಯವೂ ಉತ್ತಮವಾಗುತ್ತದೆ. ಹಿಂದಿನ ಕಾಲದಲ್ಲಿ ದೇಹದ ಸಮತೋಲನಕ್ಕೆ ರಕ್ತವನ್ನು ತೆಗೆಯುವ ಪರಿಪಾಠವಿತ್ತು. ಇಂದು ರಕ್ತದಾನದ ಮೂಲಕ ಈ ಕಾರ್ಯ ನಡೆಯುತ್ತಿದೆ ಎಂದರು.
ರೋಟರಿ ಘಟಕದ ಅಧ್ಯಕ್ಷ ರಾಧಾಕೃಷ್ಣ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಸಂಘಟನೆಯ ಸೇವಾಕಾರ್ಯಗಳ ಕುರಿತು ವಿವರಣೆಯನ್ನು ನೀಡಿದರು. ಕೋಶಾಧಿಕಾರಿ ಕೇಶವ ಬಿ, ಉಪಾಧ್ಯಕ್ಷ ಶಿಬುಜೋನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರೋಟರಿ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಲಾಯಿತು. ಪಿ.ಎಸ್.ಸಂತೋಷ್ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ರಾಘವೇಂದ್ರ ಪ್ರಸಾದ್ ವಂದಿಸಿದರು. ಕಾಸರಗೋಡು ಸರ್ಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್‍ನ ಸಹಯೋಗದೊಂದಿಗೆ ರಕ್ತಸಂಗ್ರಹ ಕಾರ್ಯ ನಡೆಯಿತು. ವಿವಿಧ ಸಂಘಟನೆಗಳ ಸದಸ್ಯರು, ಊರವರು, ರೋಟರಿ ಸದಸ್ಯರು ರಕ್ತದಾನ ಮಾಡಿದರು.