ಬದಿಯಡ್ಕ: ಶ್ರೀದೇವರ ಬಾಲಾಲಯ ಪ್ರತಿಷ್ಠೆಯ ನಂತರ ಊರಿನ ಜನತೆ ಅನುಷ್ಠಾನÀದಲ್ಲಿದ್ದು ಶ್ರೀದೇವರನ್ನು ಮತ್ತೆ ಮೂಲಾಲಯದಲ್ಲಿ ಪ್ರತಿಷ್ಠಾಪಿಸುವ ಛಲದಲ್ಲಿರಬೇಕು. ನಿರಂತರ ಮನದಲ್ಲಿ ದೇವರನ್ನು ನೆನೆಯುತ್ತ ಕಾರ್ಯತತ್ಪರರಾಗಬೇಕು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಬಾಲಾಲಯ ಪ್ರತಿಷ್ಠೆಯ ಸಂದರ್ಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರದ ವಾಸ್ತು ಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ ಭಕ್ತಾದಿಗಳನ್ನುದ್ದೇಶಿಸಿ ಮಾತನಾಡಿ, ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಒಂದು ಕಾರ್ಯವನ್ನು ಯಾಕೆ ಮಾಡುತ್ತೇವೆ ಎಂಬುದರ ಕುರಿತು ತಿಳಿದುಕೊಳ್ಳಬೇಕು. ದೇವರೊಂದಿಗೆ ನಾವೂ ಇದ್ದಾಗ ಅಲ್ಲಿ ಎಲ್ಲಾ ಶಕ್ತಿಗಳು ಒಂದಾಗುತ್ತವೆ ಎಂದರು.
ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಬಾಲಾಲಯ ಪ್ರತಿಷ್ಠೆ ಸಾಂಗವಾಗಿ ನೆರವೇರಿತು. ಶ್ರೀಕ್ಷೇತ್ರದ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.