ಕಾಸರಗೋಡು: ದೇಶದ ಆಧ್ಯಾತ್ಮಿಕತೆ ಮತ್ತು ಸನ್ಯಾಸಿ ಪರಂಪರೆಯಿಂದ ಭಾರತ ಇಂದು ವಿಶ್ವಗುರುವಿನ ಸ್ಥಾನದತ್ತ ಬಂದು ನಿಂತಿರುವುದಾಗಿ ಗೋವಾ ರಾಜ್ಯಪಾಲ, ವಕೀಲ ಪಿ.ಎನ್ ಶ್ರೀಧರನ್ ಪಿಳ್ಳೆ ತಿಳಿಸಿದ್ದಾರೆ.
ಅವರು ವಿದ್ಯಾನಗರ ಚಿನ್ಮಯ ಆಡಿಟೋರಿಯಂನಲ್ಲಿ ಚಿನ್ಮಯ ಮಿಷನ್ ಕೇರಳ ಘಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಅವರ 70ನೇ ಜನ್ಮದಿನಾಚರಣೆ'ಸಪ್ತತಿ ಆಚರಣೆ ಉದ್ಘಾಟಿಸಿ ಮಾತನಾಡಿದರು.
ವಿಶ್ವ ಮಾನವ ಸಂದೇಶ ಸಾರಿರುವ ಭಾರತದ ಆಧ್ಯಾತ್ಮಿಕತೆ ಜಗತ್ತಿಗೆ ಮಾದರಿಯಾಗಿದೆ. ಸನ್ಯಾಸಿ ಜೀವನ ಎಂದಿಗೂ ಸಮಾಜಕ್ಕೆ ಸಮರ್ಪಿತವಾಗಿದ್ದು, ಇಂತಹ ಮಹಾನುಭಾವರ ಜನ್ಮ ದಿನಾಚರಣೆ ಎಂಬುದು ಸಮಾಜಿಕ ಅಭ್ಯುದಯದ ಸಂಕೇತವಾಗಿರುತ್ತದೆ. ಸ್ವಾಮಿ ವಿವಿಕ್ತಾನಂದ ಸರಸ್ವತೀ ಅವರಂತಹ ಸಂತರು ನಡೆಸಿಕೊಂಡು ಬಂದಿರುವ ಸಮಾಜಮುಖೀ ಚಟುವಟಿಕೆಗಳಿಂದ ಚಿನ್ಮಯ ಸಂಸ್ಥೆ ಇಂದು ಕಲೆ, ಶಿಕ್ಷಣ, ಆಧ್ಯಾತ್ಮಕತೆಯೊಂದಿಗೆ ಮುಂಚೂಣಿಯಲ್ಲಿರುವುದಾಗಿ ತಿಳಿಸಿದರು.
ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಕೋಯಿಕ್ಕೋಡ್ ಕೊಳತ್ತೂರ್ ಅದ್ವೈತಾಶ್ರಮದ ಸಂಪೂಜ್ಯ ಸ್ವಾಮಿ ಚಿದಾನಂದ ಪುರಿ ಆಶೀರ್ವಚನ ನೀಡಿದರು. ಸಿಎಸ್‍ಟಿಕೆ ಮುಖ್ಯ ಸೇವಕ್ ಆರ್. ಸುರೇಶ್‍ಮೋಹನ್, ಎ.ಗೋಪಾಲಕೃಷ್ಣನ್, ಕೆ.ಕೆ ರಜನ್ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ಶಾಲಾ ವಠಾರದಲ್ಲಿ ನಿರ್ಮಿಸಿರುವ ಈಜುಕೊಳದ ಉದ್ಘಾಟನೆ ನಡೆಸಲಾಯಿತು. ಸ್ವಾಮಿ ವಿವಿಕ್ತಾನಂದ ಸರಸ್ವತೀ ಸಪ್ತತಿ ಆಚರಣೆ ಅಂಗವಾಗಿ ಕಾಸರಗೋಡು ಚಿನ್ಮಯ ಮಿಷನ್ ಹಮ್ಮಿಕೊಂಡಿರುವ ವಿವಿಧ ಸಮಾಜಮುಖಿ ಯೋಜನೆಗಳನ್ವಯ ಬಡಜನತೆಗೆ ನಿರ್ಮಿಸಿಕೊಡುತ್ತಿರುವ ಏಳನೇ ಮನೆಯ ಕೀಲಿಕೈಯನ್ನು ಸ್ವಾಮಿ ವಿವಿಕ್ತಾನಂದ ಸರಸ್ವತೀ ಫಲಾನುಭವಿಗೆ ಹಸ್ತಾಂತರಿಸಿದರು. ಬಡ ವಿದ್ಯಾರ್ಥಿಗಳಿಗೆ ಕಲಿಕೋಪಕರಣ ವಿತರಿಸಲಾಯಿತು. ಚಿನ್ಮಯ ಸಂಸ್ಥೆಯ ಕೇರಳ ಘಟಕದ ವಿವಿಧ ಘಟಕಗಳ ವತಿಯಿಂದ ಸ್ವಾಮಿ ವಿವಿಕ್ತಾನಂದ ಸರಸ್ವತೀ ಅವರನ್ನು ಶಾಲುಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.
ಚಿನ್ಮಯ ಮಿಷನ್ ಕಾರ್ಯದರ್ಶಿ ಕೆ. ಬಾಲಚಂದ್ರ ಮೆನನ್ ಸ್ವಾಗತಿಸಿದರು. ಚಿನ್ಮ ವಿದ್ಯಾಸಂಸ್ಥೆ ಪ್ರಾಂಶುಪಾಲ ಸುನಿಲ್ ಕುಮಾರ್ ವಂದಿಸಿದರು.