ಬದಿಯಡ್ಕ: ಪಣಿಕ್ಕರ್ ಅವರು ಕೇರಳದಲ್ಲಿ ಗ್ರಂಥಾಲಯ ಚಳುವಳಿಯ ಮೂಲಕ ಸಮಾಜದಲ್ಲಿ ಜ್ಞಾನದ ಮಹತ್ವ ಸಾರಿದವರು.ಮಕ್ಕಳು ಓದುವ ಹವ್ಯಾಸ ಬೆಳೆಸಬೇಕು ಎಂದು ಕುಂಬಳೆ ಉಪಜಿಲ್ಲಾಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಾಲಕ ,ಶಿಕ್ಷಕ,ರಂಗ ನಿರ್ದೇಶಕ ಪ್ರವೀಣ್ ಕಾರಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪೆರಡಾಲ ಸರಕಾರಿ ಪ್ರೌಢ ಶಾಲೆಯಲ್ಲಿ ಪಿ.ಎನ್.ಪಣಿಕ್ಕರ್ ಸ್ಮರಣೆಯೊಂದಿಗೆ ಓದುವ ಮಾಸಾಚರಣೆ ಮತ್ತು ಶಾಲೆಯ ವಿವಿಧ ಕ್ಲಬ್ ಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಕವನಗಳನ್ನು ಹಾಡಿ ಮಕ್ಕಳ ಮನಸ್ಸನ್ನು ರಂಜಿಸಿದರು.ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಬೀನಾ ಟೀಚರ್ ಅಧ್ಯಕ್ಷತೆ ವಹಿಸಿ ಶಾಲಾ ವಿವಿಧ ಕ್ಲಬ್ ಗಳ ವಿವರಣೆ ನೀಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್ ಕರೋಡಿ ಅವರು ದಿನಪತ್ರಿಕೆ ಓದುವ ಹವ್ಯಾಸದ ಮಹತ್ವ ತಿಳಿಸಿದರು. ಉಪಾಧ್ಯಕ್ಷ ರಾಮ ಅವರು ಮಾತನಾಡಿ ಪಣಿಕ್ಕರ್ ಅವರ ಜೀವನದ ಕೊಡುಗೆ ಮತ್ತು ಗ್ರಂಥಾಲಯ ಕುರಿತು ವಿವರಿಸಿದರು. ಶಾಲಾ ಸ್ಟಾಫ್ ಸೆಕ್ರೆಟರಿ ರಿಶಾದ್ ಪಿ.ಎಂ.ಎ ಶುಭ ಹಾರೈಸಿದರು. ಶಾಲಾ ವಿದ್ಯಾರಂಗ ಸಾಹಿತ್ಯ ವೇದಿಕೆಯ ಸಂಚಾಲಕ ಮನು ರಾಜ್ ಸ್ವಾಗತಿಸಿ, ಎಸ್.ಆರ್.ಜಿ.ಸಂಚಾಲಕ ಶ್ರೀಧರ ಭಟ್ ಧನ್ಯವಾದ ಅರ್ಪಿಸಿದರು. ಶ್ರೀಧರನ್ ಕಾರ್ಯಕ್ರಮ ನಿರೂಪಿಸಿದರು.ವಾಚನಾ ಮಾಸಾಚರಣೆ ಭಾಗವಾಗಿ ಪುಸ್ತಕ ಪ್ರದರ್ಶನ, ಕತೆ ಕವಿತೆ ಚಿತ್ರ ರಚನೆ,ಪುಸ್ತಕ ಆಸ್ವಾದನೆ,ರಸಪ್ರಶ್ನೆ,ಹಸ್ತ ಪತ್ರಿಕೆ ತಯಾರಿ ಮುಂತಾದ ಚಟುವಟಿಕೆಗಳು ನಡೆಯಲಿವೆ.