ಆರೂರು: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ಯುವತಿಯೊಬ್ಬಳ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಅಪರೂಪಕ್ಕೆ ತಂದೆಯಿಂದಲೇ ಲಾಟರಿ ಖರೀದಿ ಮಾಡಿದ್ದ ಯುವತಿಗೆ ಬರೋಬ್ಬರಿ 75 ಲಕ್ಷ ರೂ. ಹಣ ಪ್ರಥಮ ಬಹುಮಾನವಾಗಿ ಬಂದಿದೆ. ಅದೃಷ್ಟವಂತೆಯ ಹೆಸರು ಆಶ್ಲೆ. ಈಕೆಯ ತಂದೆ ಎನ್.ಜೆ. ಅಗಸ್ಟಿನ್ ಲಾಟರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದೀಗ ಬಹುಮಾನ ಗೆದ್ದ ಹಿನ್ನೆಲೆಯಲ್ಲಿ ಆಶ್ಲೆ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಸ್ತ್ರೀ ಶಕ್ತಿ ಲಾಟರಿ ಕಂಪನಿ ಬಹುಮಾನವನ್ನು ಯುವತಿಗೆ ವಿತರಣೆ ಮಾಡಿದೆ.
ಬಹುಮಾನ ಒಲಿದು ಬಂದ ಎಸ್ಜಿ 888030 ನಂಬರ್ನ ಲಾಟರಿಯನ್ನು ಆಶ್ಲೆ ತನ್ನ ತಂದೆಯ ಲಾಟರಿ ಅಂಗಡಿಯಿಂದಲೇ ಖರೀದಿ ಮಾಡಿದ್ದಳು. ಎಂದಿನಂತೆ ಕೆಲಸಕ್ಕೆ ಹೋಗುವಾಗ ಅಪರೂಪಕ್ಕೆ ಲಾಟರಿ ತೆಗೆದುಕೊಂಡಿದ್ದಳು. ಇದೀಗ ಆಶ್ಲೆ ಬಹುಮಾನ ಹಣ ಪಡೆದಿದ್ದು, ಆಕೆಯ ತಂದೆ ಅಗಸ್ಟಿನ್ ಸಹ ಕಮಿಷನ್ ಪಡೆದಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಬಳಿ ಇರುವ ಆರೂರು ದೇವಸ್ಥಾನದ ಹತ್ತಿರ ಕಳೆದ 10 ವರ್ಷಗಳಿಂದ ಅಗಸ್ಟಿನ್ ಲಾಟರಿ ಅಂಗಡಿ ನಡೆಸುತ್ತಿದ್ದಾರೆ. ಮಗಳು ಆಶ್ಲೆ ಆರೂರಿನ ವ್ಯಾಪಾರ ಭವನದಲ್ಲಿ ಅಕೌಂಟೆಂಟ್ ಆಗಿದ್ದಾರೆ. ಅಗಸ್ಟಿನ್ನ ಮೂವರು ಮಕ್ಕಳಲ್ಲಿ ಆಶ್ಲೆ ಎರಡನೆಯವಳು. ಆರೂರಿನ ಎಸ್ಬಿಐಗೆ ಬಹುಮಾನ ಬಂದ ಲಾಟರಿ ಟಿಕೆಟ್ ಸಲ್ಲಿಸಿ, ಹಣವನ್ನು ಪಡೆದಿದ್ದಾರೆ.