ಬಲ್ಲಿಯಾ: 'ಪ್ರಯಾಗ್‌ರಾಜ್‌ನ ನಿಷಾದ್‌ರಾಜ್ ಕೋಟೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸದಿದ್ದರೆ ನಿಶಾದ್ ಸಮುದಾಯವೇ ಗಂಗಾ ನದಿಗೆ ಕಿತ್ತೆಸೆಯಲಿದೆ' ಎಂದು ಉತ್ತರ ಪ್ರದೇಶದ ಮೀನುಗಾರಿಕೆ ಸಚಿವ ಸಂಜಯ್ ನಿಷಾದ್ ನೀಡಿರುವ ಹೇಳಿಕೆ ವಿವಾದ ಸೃಷ್ಟಿಸಿದೆ.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಈ ಕೋಟೆಯ ಉತ್ಖನನ ನಡೆದಿತ್ತು. ಆ ವೇಳೆ ಮಸೀದಿ ಇರಲಿಲ್ಲ. ಈ ಬಗ್ಗೆ ಪ್ರಾಚ್ಯವಸ್ತು ಪುರಾತತ್ವ ಇಲಾಖೆಯ ವರದಿಯೇ ಹೇಳುತ್ತದೆ. ಅದಾದ ಬಳಿಕ ಕಾನೂನುಬಾಹಿರವಾಗಿ ಮಸೀದಿ ನಿರ್ಮಿಸಲಾಗಿದೆ' ಎಂದು ದೂರಿದರು.
ಕೋಟೆಯು ಹಿಂದೂಗಳು ಮತ್ತು ನಿಷಾದ್ ಸಮುದಾಯದ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಜಿಹಾದಿಗಳಿಗೆ (ಮುಸ್ಲಿಮರು) ಇಲ್ಲಿ ಅವಕಾಶ ಇಲ್ಲ ಎಂದರು.
'ಬುಡಕಟ್ಟು ರಾಜನಾದ ನಿಷಾದ್ ರಾಜ್ ಜಯಂತ್ಯುತ್ಸವಕ್ಕೆ ಲಕ್ಷಾಂತರ ಜನರು ಕೋಟೆಗೆ ಭೇಟಿ ನೀಡುತ್ತಾರೆ. ಈ ಬಾರಿ ಆಗಮಿಸಿರುವ ಸಮುದಾಯದ ಜನರು ಮಸೀದಿಯನ್ನು ಧ್ವಂಸಗೊಳಿಸಲಿದ್ದಾರೆ' ಎಂದು ಹೇಳಿದರು.
ಬಿಸಿಗಾಳಿಗೆ ಬಲ್ಲಿಯಾದಲ್ಲಿ ಹಲವು ಮಂದಿ ಮೃತಪಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, 'ಇದು ದೇವರು ನೀಡಿದ ಶಿಕ್ಷೆ' ಎಂದು ಪ್ರತಿಕ್ರಿಯಿಸಿರುವುದೂ ಚರ್ಚೆಗೆ ಗ್ರಾಸವಾಗಿದೆ.
'ಈ ಬಗ್ಗೆ ಸಾವಿನ ಪ್ರಕರಣದ ಬಗ್ಗೆ ಸಮಿತಿ ರಚಿಸಿದ್ದು, ವರದಿ ಸಲ್ಲಿಸಿದ ಬಳಿಕ ಸಂತ್ರಸ್ತರಿಗೆ ಸರ್ಕಾರ ಅಗತ್ಯ ನೆರವು ನೀಡಲಿದೆ' ಎಂದು ಹೇಳಿದರು.