ಇಡುಕ್ಕಿ: ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಸಾಕಷ್ಟು ಜಾಹೀರಾತುಗಳನ್ನು ನೋಡುತ್ತಿರುತ್ತೇವೆ. ಆದರೆ, ಇಂತಹ ಜಾಹೀರಾತುಗಳ ಹಿಂದೆ ಕೆಲವು ಗೋಮುಖ ವ್ಯಾಘ್ರಗಳು ಇರುತ್ತವೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ.
ಕೇರಳದ ಇಡುಕ್ಕಿ ಮೂಲದ ಯುವಕನೊಬ್ಬ ಆನ್ಲೈನ್ ಜಾಬ್ ಇಂಟರ್ವ್ಯೂವ್ ಜಾಲಕ್ಕೆ ಸಿಲುಕಿ ನರಕಯಾತನೆ ಅನುಭವಿಸಿದ್ದು, ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ಜಾಲತಾಣದಲ್ಲಿ ಉದ್ಯೋಗ ಮಾಹಿತಿಯ ಪೋಸ್ಟರ್ ನೋಡಿದ ಯುವಕ, ಅದರಲ್ಲಿದ್ದ ಫೋನ್ ನಂಬರ್ ಕರೆ ಮಾಡುತ್ತಾನೆ. ದೂರವಾಣಿಯಲ್ಲಿ ಮಾತನಾಡಿದ ಅಪರಿಚಿತ ಅಥವಾ ಅಪರಿಚಿತೆಯ ಮಾತಿಗೆ ಮರುಳಾಗುವ ಯುವಕ, ಅವನು ಅಥವಾ ಅವಳು ಹೇಳಿದಂತೆ ವರ್ಚುವಲ್ ಇಂಟರ್ವ್ಯೂವ್ನಲ್ಲಿ ಭಾಗಿಯಾಗುತ್ತಾನೆ.
ಮಾರ್ಫ್ ಫೋಟೋಗಳು
ಇದರ ನಡುವೆ ಯುವಕನಿಂದ ವಾಟ್ಸ್ಆಯಪ್ ನಂಬರ್, ಈಮೇಲ್ ಮತ್ತು ಇತರೆ ಮಾಹಿತಿಗಳನ್ನು ಅಪರಿಚಿತ ಗ್ಯಾಂಗ್ ಪಡೆದುಕೊಂಡಿತ್ತು. ನಿಜವಾಗಿಯು ಕೆಲಸ ಸಿಗುತ್ತದೆ ಎಂದು ನಂಬಿದ್ದ ಯುವಕನಿಗೆ ನಂತರ ದಿನಗಳಲ್ಲಿ ಭಾರೀ ಆಘಾತ ಕಾದಿತ್ತು. ಏಕೆಂದರೆ, ಕೆಲವೇ ದಿನಗಳಲ್ಲಿ ಆತನ ವಾಟ್ಸ್ಆಯಪ್ ನಂಬರ್ಗೆ ಮಾರ್ಫ್ ಮಾಡಿದ ಫೋಟೋಗಳು ಬರಲು ಆರಂಭವಾದವು. ಇದರಿಂದ ಯುವಕ ಭಯಭೀತನಾದ.
ಫೋಟೋಗಳು ಶೇರ್
ಯುವಕನಿಗೆ ಕರೆ ಮಾಡಿದ ಗ್ಯಾಂಗ್ ಹಣಕ್ಕಾಗಿ ಬೇಡಿಕೆ ಇಟ್ಟರು. ಹಣ ಕೊಡದಿದ್ದರೆ ಸಂಬಂಧಿಕರು ಮತ್ತು ಸ್ನೇಹಿತರಿಗೆ ಫೋಟೋಗಳನ್ನು ಶೇರ್ ಮಾಡುವುದಾಗಿ ಹೆದರಿಸಿದರು. ಆರಂಭದಲ್ಲಿ ಯುವಕ ಬೆದರಿಕೆಯನ್ನು ನಿರ್ಲಕ್ಷಿಸಿದ. ಆದರೆ, ಫೋಟೋಗಳು ಸಂಬಂಧಿಕರು ಮತ್ತು ಸ್ನೇಹಿತರ ವಾಟ್ಸ್ಆಯಪ್ ನಂಬರ್ಗೆ ಶೇರ್ ಆದವು.
ಇದರಿಂದ ಮತ್ತಷ್ಟು ಚಿಂತಾಕ್ರಾಂತನಾದ ಯುವಕ ಹಣ ನೀಡಲು ಒಪ್ಪಿಕೊಂಡು ಸುಮಾರು 25 ಸಾವಿರ ರೂ. ಹಣವನ್ನು ನೀಡಿದ್ದ. ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್, ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಟ್ಟರು. ಕ್ಷಣ ಕ್ಷಣಕ್ಕೂ ಯುವಕನಿಗೆ ನರಕಯಾತನೆ ನೀಡಲು ಆರಂಭಿಸಿದರು. ಇದರಿಂದ ಬೇಸತ್ತ ಯುವಕ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ತನಿಖೆ ನಡೆಯುತ್ತಿದೆ.