ನವದೆಹಲಿ: 'ನಾವು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಆದರೆ ರೈಲ್ವೆಯ ನಮ್ಮ ಉದ್ಯೋಗಗಳಿಗೆ ಮರಳಿದ್ದೇವೆ' ಎಂದು ಪ್ರತಿಭಟನೆನಿರತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಭಜರಂಗ್ ಪೂನಿಯಾ ಅವರು ಸೋಮವಾರ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕುಸ್ತಿಪಟುಗಳು ಶನಿವಾರ ಸಂಜೆ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಈ ಸ್ಪಷ್ಟನೆ ನೀಡಿದ್ದಾರೆ.
ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಅವರ ವಿರುದ್ಧದ ಪ್ರತಿಭಟನೆಯನ್ನು ಮುನ್ನಡೆಸಿದ್ದ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಭಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್ ಅವರು ಐದು ದಿನಗಳ ಹಿಂದೆಯೇ ಉದ್ಯೋಗಕ್ಕೆ ಮರುಸೇರ್ಪಡೆ ಆಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ವರದಿಯಾಗಿತ್ತು. ಕುಸ್ತಿಪಟುಗಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ ಎಂಬ ವದಂತಿಗಳು ಈ ವರದಿಯಿಂದಾಗಿ ಹಬ್ಬಿದ್ದವು. ಜೊತೆಗೆ, ಹದಿಹರೆಯದ ಬಾಲಕಿಯೂ ಸೇರಿ ಮಹಿಳಾ ಕುಸ್ತಿಪಟುಗಳು ಬ್ರಿಜ್‌ಭೂಷಣ್ ವಿರುದ್ಧದ ದೂರನ್ನೂ ಹಿಂದೆ ಪಡೆದಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು.
ಈ ಎಲ್ಲಾ ಊಹಾಪೋಹಗಳನ್ನು ಕುಸ್ತಿಪಟುಗಳು ನಿರಾಕರಿಸಿದ್ದಾರೆ.
ಈ ವರದಿಗಳು ಸಂಪೂರ್ಣವಾಗಿ ಸುಳ್ಳು. ನ್ಯಾಯಕ್ಕಾಗಿ ಹೋರಾಟುತ್ತಿರುವ ನಾವು ನಮ್ಮ ಹೆಜ್ಜೆಯನ್ನು ಹಿಂದಿಟ್ಟಿಲ್ಲ, ಇಡುವುದೂ ಇಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೆಯ ನನ್ನ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದೇನೆ. ದಯವಿಟ್ಟು ಈ ಕುರಿತು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಾಕ್ಷಿ ಮಲಿಕ್ ಟ್ವೀಟ್ ಮಾಡಿದ್ದಾರೆ.
ಉದ್ಯೋಗಕ್ಕೆ ಪುನಃ ಸೇರ್ಪಡೆಯಾಗುವ ಮೂಲಕ ಪ್ರತಿಭಟನೆಯಿಂದ ದೂರ ಸರಿಯುತ್ತಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, 'ಹೋರಾಟವನ್ನು ಮುಂದೆ ಕೊಂಡೊಯ್ಯಲು ನಾವು ತಂತ್ರಗಾರಿಕೆ ರೂಪಿಸುತ್ತಿದ್ದೇವೆ. ಹಿಂಸಾಚಾರ ಇಲ್ಲದೇ ಪ್ರತಿಭಟನೆಯನ್ನು ಮುನ್ನಡೆಸುವುದು ಹೇಗೆ ಎಂಬುದರ ಕುರಿತು ನಾವು ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ರೈಲ್ವೆ ಇಲಾಖೆಯಲ್ಲಿ ವಿಶೇಷ ಕರ್ತವ್ಯಗಳ ಅಧಿಕಾರಿ ಹುದ್ದೆಯನ್ನು (ಒಎಸ್‌ಡಿ) ಹೊಂದಿದ್ದೇನೆ. ಪ್ರತಿಭಟನೆಯನ್ನು ಪುನಃ ಆರಂಭಿಸುವವರೆಗೆ ನನ್ನ ಉದ್ಯೋಗದ ಜವಾಬ್ದಾರಿಗಳನ್ನು ನಿಭಾಯಿಸುತ್ತೇನೆ' ಎಂದು ಹೇಳಿದರು.
ಪ್ರತಿಭಟನಕಾರರಿಗೆ ತೊಂದರೆ ನೀಡಬೇಕೆಂದೇ ಸುಳ್ಳು ಸುದ್ದಿ ಹಬ್ಬಿಸಲಾಗುತ್ತದೆ ಎಂದು ಆರೋಪಿಸಿರುವ ಪೂನಿಯಾ, 'ನಮ್ಮನ್ನು ಹಿಮ್ಮೆಟ್ಟಿಸಲಾಯಿತು ಅಥವಾ ನಾವು ಪ್ರತಿಭಟನೆಯಿಂದ ಹಿಂದೆ ಸರಿದಿದ್ದೇವೆ ಎಂಬುದು ಸುಳ್ಳು' ಎಂದರು.