ಹೈದರಾಬಾದ್: ಆಘಾತಕಾರಿ ಘಟನೆಯೊಂದರಲ್ಲಿ ಅರ್ಚಕರೊಬ್ಬರು ತಮ್ಮ ಪ್ರೇಯಸಿಯನ್ನು ಕೊಲೆ ಮಾಡಿ ಆಕೆಯ ದೇಹವನ್ನು ಮ್ಯಾನ್ಹೋಲ್ಗೆ ಎಸೆದಿರುವ ಘಟನೆ ತೆಲಂಗಾಣದ ರಾಜಧಾನಿ ಹೈದರಬಾದಿನಲ್ಲಿ ನಡೆದಿದೆ.
ಶಂಶಾಭಾದ್ನಲ್ಲಿರುವ ಬಂಗಾರು ಮೈಸಮ್ಮ ದೇವಸ್ಥಾನದ ಅರ್ಚಕ ವೆಂಕಟಸೂರ್ಯ ಸಾಯಿಕೃಷ್ಣ(36) ಎಂದು ತಿಳಿದು ಬಂದಿದ್ದು, ಮೃತ ದುರ್ದೈವಿಯನ್ನು ಕುರುಗಂಟಿ ಅಪ್ಸರಾ(30) ಎಂದು ವರದಿಯಾಗಿದೆ.
ದಿನದಿಂದ ದಿನಕ್ಕೆ ಅಪ್ಸರಾ ಮದುವೆಯಾಗುವಂತೆ ಸಾಯಿಕೃಷ್ಣ ಮೇಲೆ ಒತ್ತಡ ಹೇರುತ್ತಿದ್ದ ಕಾರಣ ಆರೋಪಿಯೂ ಆಕೆಯ ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಮೊದಲಿಗೆ ಅಪ್ಸರಾಳನ್ನು ಮಾತನಾಡುವ ನೆಪದಲ್ಲಿ ಭೇಟಿ ಮಾಡಿದ ಆರೋಪಿಯೂ ಆಕೆಯನ್ನು ಕೊಲೆ ಮಾಡಿ ಮೃತದೇಹವನ್ನು ಮ್ಯಾನ್ಹೋಲ್ ಒಳಗೆ ಎಸೆದಿದ್ದಾನೆ.
ತನಿಖೆ ವೇಳೆ ಕೃತ್ಯ ಬೆಳಕಿಗೆ
ಬಳಿಕ ತನಗೂ ಇದಕ್ಕೂ ಶಂಬಂಧ ಇಲ್ಲ ಎಂಬಂತೆ ಮೃತಳ ಮನೆಗೆ ಹೋಗಿ ಪೋನ್ ರಿಸೀವ್ ಮಾಡುತ್ತಿಲ್ಲ ಎಂದು ಹೇಳಿ ಆಕೆಯ ಪೋಷಕರಿಗೆ ದೂರು ನೀಡುವಂತೆ ಸಲಹೆ ನೀಡಿ ಬಂದಿದ್ದಾನೆ. ಅದರಂತೆ ಅಪ್ಸರಾಳ ತಂದೆ-ತಾಯಿ ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ಧಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೊದಲಿಗೆ ಆಕೆಯ ನಂಬರ್ ಟ್ರೇಸ್ ಮಾಡಿದ್ದಾರೆ. ಬಳಿಕ ನಂಬರ್ ಕಡೆಯದಾಗಿ ಪತ್ತೆಯಾದ ಸ್ಥಳಕ್ಕೆ ಹೋಗಿ ಸಿಸಿಟಿವಿಗಳ ಪರಿಶೀಲನೆ ನಡೆಸಿದಾಗ ಆರೋಪಿ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಾಯಿಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ತುಂಬಾ ಒಳ್ಳೆಯ ಮನುಷ್ಯ
ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಪ್ಸರಾ ತಾಯಿ ಶನಿವಾರ ನನ್ನ ಮಗಳು ಕೊಯಮತ್ತೂರಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾಳೆ. ಭಾನುವಾರ ಬೆಳಗ್ಗೆ ಸಾಯಿಕೃಷ್ಣ ನಮ್ಮ ಮನೆಗೆ ಬಂದು ಅಪ್ಸರಾ ಪೋನ್ ರಿಸೀವ್ ಮಾಡುತ್ತಿಲ್ಲ ಎಂದು ಹೇಳಿದ. ಬಳಿಕ ನಾವು ಪೊಲೀಸರಿಗೆ ದೂರು ನೀಡಿದಾಗ ಆತನೇ ನನ್ನ ಮಗಳನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಬೇಸರಿಸಿದ್ಧಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಸಾಯಿಕೃಷ್ಣ ತಂದೆ ನನ್ನ ಮಗ ತುಂಬಾ ಒಳ್ಳೆಯ ಮನುಷ್ಯ. ಮೃತ ಹುಡುಗಿಯೂ ಆಗಾಗ ನಮ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಳು ಅವಳ ಜೊತೆ ಹೆಚ್ಚಾಗಿ ಮಾತನಾಡಬೇಡ ಎಂದು ಎಚ್ಚರಿಸಿದ್ದೆ. ಆಕೆ ನೀಡಿರುವ ಕಿರುಕುಳದಿಂದ ನನ್ನ ಮಗ ಕೃತ್ಯ ಎಸಗಿರಬಹುದು ಎಂದು ಹೇಳಿದ್ದಾರೆ.