ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಮೇರೆಗೆ ಮಣಿಪುರದಲ್ಲಿ ಶಾಂತಿ ಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ.
ಸರ್ವಪಕ್ಷ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಣಿಪುರ ಬಿಜೆಪಿ ಉಸ್ತುವಾರಿ ಸಂಬಿತ್ ಪಾತ್ರಾ ಅವರು, ರಾಜ್ಯದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ, ಪರಿಸ್ಥಿತಿಯ ಬಗ್ಗೆ ಪ್ರಧಾನಿ ಮೋದಿಯೊಂದಿಗೆ ಮಾತನಾಡದ ಅಥವಾ ಪ್ರಧಾನಿ ಸೂಚನೆಗಳನ್ನು ನೀಡದ “ಒಂದು ದಿನವೂ ಇಲ್ಲ” ಎಂದು ಅಮಿತ್ ಶಾ ಸಭೆಗೆ ತಿಳಿಸಿದರು ಎಂದರು.
ವಿರೋಧ ಪಕ್ಷಗಳು ಮಣಿಪುರದ ಪರಿಸ್ಥಿತಿಯನ್ನು ಕೇಂದ್ರ ನಿಭಾಯಿಸುತ್ತಿರುವ ರೀತಿಯನ್ನು ತೀವ್ರವಾಗಿ ಟೀಕಿಸಿವೆ ಮತ್ತು ಈ ವಿಷಯದ ಬಗ್ಗೆ ಪ್ರಧಾನ ಮೋದಿಯ "ಮೌನ" ವನ್ನು ಪ್ರಶ್ನಿಸಿವೆ. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಸುಮಾರು 120 ಜನ ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 3,000 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೇ 3 ರಂದು ಹಿಂಸಾಚಾರ ಪ್ರಾರಂಭವಾದಾಗಿನಿಂದ ಈ ಬಗ್ಗೆ ಪ್ರತಿದಿನವೂ ಪ್ರಧಾನಿಯೊಂದಿಗೆ ಮಾತನಾಡಿದ್ದೇನೆ ಮತ್ತು ನಿತ್ಯವೂ ಪ್ರಧಾನಿ ಸೂಚನೆಗಳನ್ನು ನೀಡಿದ್ದಾರೆ ಎಂದು ಅಮಿತ್ ಶಾ ಅವರು ಅವರು ಸಭೆಗೆ ತಿಳಿಸಿದರು ಎಂದರು. “ರಾಜ್ಯದಲ್ಲಿ ಶಾಂತಿ ಪುನಃಸ್ಥಾಪಿಸುವ ಪ್ರಯತ್ನಗಳು ಪ್ರಧಾನ ಮೋದಿಯವರ ಸೂಚನೆಯ ಮೇರೆಗೆ ದೊಡ್ಡದಾಗಿ ನಡೆಯುತ್ತಿವೆ” ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್, ಎಎಪಿ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಪಕ್ಷಗಳು ಭಾಗವಹಿಸಿದ್ದವು.