ಕಾಸರಗೋಡು: ಮಳೆಗಾಲ ಆರಂಭದಲ್ಲಿ ತೆಂಗು ಮತ್ತು ಅಡಕಗೆ ಬಾಧಿಸುವ ವಿವಿಧ ರೋಗಗಳು ಮತ್ತು ಕೀಟಗಳ ಬಾಧೆ ತಡೆಗಟ್ಟುವ ಅಗತ್ಯಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಪಿಸಿಆರ್‍ಐ ನಿರ್ದೇಶಕ ಡಾ.ಕೆ.ಬಿ. ಹೆಬ್ಬಾರ್ ತಿಳಿಸಿದ್ದಾರೆ.
ಅವರು ಸಿಪಿಸಿಆರ್‍ಐನಲ್ಲಿ ಕೃಷಿ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೆಂಗಿನಕಾಯಿಯ ಮೇಲೆ ಪರಿಣಾಮ ಬೀರುವ ಶಿಲೀಂಧ್ರಗಳಿಂದ ಉಂಟಾಗುವ ತೆಂಗಿನ ತಿರಿಕೊಳೆತ, ಅಡಕೆ ಕೃಷಿಯನ್ನು ಬಾಧಿಸುವ ಮಹಾಲಿ, ಎಲೆ ಚುಕ್ಕೆ ರೋಗ, ತೆಂಗನ್ನು ಬಾಧಿಸುವ ವಿವಿಧ ಕೀಟಗಳ ವಿರುದ್ಧ ಸಮಗ್ರ ನಿಯಂತ್ರಣ ವಿಧಾನಗಳ ಮೂಲಕ ಕೀಟ ಬಾಧೆಯಿಂದ ಉಂಟಾಗುವ ಬೆಳೆ ನಷ್ಟವನ್ನು ತಪ್ಪಿಸಬಹುದು. ತೆಂಗಿನ ಕೊಂಬೆಯನ್ನು ಸ್ವಚ್ಛಗೊಳಿಸಿ, ಹಾನಿಗೊಳಗಾದ ತೆಂಗಿನ ಮರಗಳನ್ನು ಕತ್ತರಿಸಿ ನಾಶಪಡಿಸಬೇಕು. ತೆಂಗಿನ ತಿರಿ ಕೊಳೆತ ರೋಗ ತಡೆಗಟ್ಟಲು ಮಳೆಗಾಲಕ್ಕೂ 300 ಮಿಲಿ ಬೋರ್ಡೋ ಮಿಶ್ರಣವನ್ನು ಬುಡಕ್ಕೆ ಸುರಿಯಬೇಕು. ಅಡಕೆ ಮರದ ಕಾಂಡ ಮತ್ತು ಅಡಕೆ ಗೊಂಚಲುಗಳಿಗೆ ಬೋರ್ಡೋ ಮಿಶ್ರಣವನ್ನು ಸಿಂಪಡಿಸುವುದರಿಂದ ಕಾಂಡ ಕೊಳೆತ ಮತ್ತು ಮಹಾಲಿ ರೋಗ ತಡೆಗಟ್ಟಬಹುದಾಗಿದೆ.
ಸಹಾಯಕ ಕೃಷಿ ನಿರ್ದೇಶಕಿ ಜ್ಯೋತಿ ಕುಮಾರಿ ಮುಖ್ಯ ಅತಿಥಿಯಾಗಿದ್ದರು. ಪ್ರಧಾನ ವಿಜ್ಞಾನಿ ಡಾ. ತಂಬಾನ್, ಸಸ್ಯ ರೋಗ ಸಂರಕ್ಷಣಾ ವಿಭಾಗದ ಮುಖ್ಯಸ್ಥ ಡಾ.ವಿನಾಯಕ ಹೆಗ್ಡೆ, ವಿಜ್ಞಾನಿ ಡಾ.ಪಿ.ಎಸ್.ಪ್ರತಿಭಾ ತರಗತಿ ನಡೆಸಿದರು.