ಬುಲಂದ್‌ಶಹರ್: ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ 23 ವರ್ಷದ ಮುಸ್ಲಿಂ ಯುವಕನನ್ನು ಕೆಲವರು ಮರಕ್ಕೆ ಕಟ್ಟಿ ಥಳಿಸಿದ್ದಾರೆ. ಅಷ್ಟೇ ಅಲ್ಲ, ಯುವಕನಿಗೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ತಲೆ ಬೋಳಿಸಿದ್ದಾರೆ.
ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ಯುವಕನನ್ನು ಈ ಜನರು ಹಿಡಿದಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಜೂನ್ 13ರಂದು ಜಿಲ್ಲೆಯ ಕಾಕೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಿಡಿಯೋವನ್ನು ಗಮನಿಸಿದ ಪೊಲೀಸರು ವ್ಯಕ್ತಿಯ ತಂದೆಯ ದೂರನ್ನು ಸ್ವೀಕರಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಸಂತ್ರಸ್ತನನ್ನು ದಿನಗೂಲಿ ಕಾರ್ಮಿಕ ಸಾಹಿಲ್ ಎಂದು ಗುರುತಿಸಲಾಗಿದೆ.