ಕಾಸರಗೋಡು: ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು. ಬಂದರು, ವಸ್ತು ಸಂಗ್ರಹಾಲಯ ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರ್‍ಕೋವಿಲ್ ಆನ್‍ಲೈನ್ ಮೂಲಕ ಪಾಲ್ಗೊಂಡು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮಾತನಾಡಿದ ಅವರು ಮಳೆಗಾಲದಲ್ಲಿ ಎದುರಾಗಬಹುದಾದ ವಿಪತ್ತು ತಡೆಗಟ್ಟುವಲ್ಲಿ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಪೂರ್ವಸಿದ್ಧತೆ ಕೈಗೊಳ್ಳಬೇಕು. ರಸ್ತೆ ಅಂಚಿಗೆ ಹಾಗೂ ಬಸ್ ನಿಲ್ದಾಣ ಕೇಂದ್ರಗಳಲ್ಲಿ ಅಪಾಯಕಾರಿಯಾಗಿ ಬೆಳೆದು ನಿಂತಿರುವ ಮರಗಳ ರೆಂಬೆ ಕಡಿದು ತೆಗೆಯುವುದರ ಜತೆಗೆ ಒಣಗಿ ನಿಂತಿರುವ ಮರಗಳನ್ನು ತೆರವುಗೊಳಿಸಬೇಕು. ಜಲಮೂಲ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಸಂಗ್ರಹಗೊಂಡಿತರುವ ತ್ಯಾಜ್ಯ ತೆರವುಗೊಳಿಸಲು ಸ್ಥಳೀಯಾಡಳಿತ ಸಂಸ್ಥೆ ಮುಂದಾಗಬೇಕು. ಪರಿಸರ ಶುಚೀಕರಣ ಪಾಲಿಸುವುದೊಂದಿಗೆ ಮಳೆಗಾಲದಲ್ಲಿ ಸೊಳ್ಳೆಗಳ ಮೂಲಕ ಹರಡಬಹುದಾದ ರೋಗ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲೂ ಸೂಚಿಸಿದರು. ಪ್ರ್ರವಾಹ, ಭೂಕುಸಿತ ಮತ್ತು ಸಮುದ್ರ ಕೊರೆತದಂತಹ ನೈಸರ್ಗಿಕ ವಿಕೋಪಗಳನ್ನು ಎದುರಿಸುವ ನಿಟ್ಟಿನಲ್ಲಿ ಪೊಲೀಸ್ ಹಾಗೂ ಜಿಲ್ಲೆಯ ಎಲ್ಲ ಐದು ಅಗ್ನಿಶಾಮಕ ಠಾಣೆಗಳು ಸಜ್ಜಾಗಿವೆ. ತುರ್ತು ತರಬೇತಿ ಹೊಂದಿರುವ 300 ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸಮುದ್ರ ಪ್ರಕ್ಷುಬ್ಧಗೊಳ್ಳಲು ಸಾಧ್ಯತೆಯಿರುವ ತ್ರಿಕ್ಕನ್ನಾಡು ಕರಾವಳಿಯಲ್ಲಿ ಜಿಯೋಬ್ಯಾಗ್ ಅಳವಡಿಸಲಾಗಿದ್ದು, ಕೀಯೂರಿನಲ್ಲೂ ಜಿಯೋಬ್ಯಾಗ್ ರಕ್ಷಣೆಯನ್ನು ಪರಿಚಯಿಸಲಾಗುವುದು. ಇನ್ನು ಗೋವಾದಲ್ಲಿ ವಿಶೇಷ ತರಬೇತಿ ಪಡೆದ 25 ಮಂದಿ ಮೀನುಗಾರರು ರಕ್ಷಣಾ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಕೆಎಸ್‍ಇಬಿ ನೇತೃತ್ವದಲ್ಲಿ 24 ಗಂಟೆಗಳ ನಿಯಂತ್ರಣ ಕೊಠಡಿಗಳನ್ನು ಪ್ರಾರಂಭಿಸಲಾಗುವುದು ಎಂದೂ ಸಭೆಗೆ ತಿಳಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಅಲ್ಲಲ್ಲಿ ನೀರು ದಾಸ್ತಾನುಗೊಂಡು ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ನಿಟ್ಟಿನಲ್ಲಿ ಜೂನ್ 17ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಇಭಾಶೇಖರ್ ತಿಳಿಸಿದರು.
ಎಡಿಎಂ ಕೆ.ನವೀನ್ ಬಾಬು, ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್, ಆರ್‍ಡಿಒ ಅತುಲ್ ಸ್ವಾಮಿನಾಥ್, ಸ್ಥಳೀಯಾಡಳಿತ ಇಲಾಖೆ ಉಪ ನಿರ್ದೇಶಕ ಜೇಸನ್ ಮ್ಯಾಥ್ಯೂ, ಡಿವೈಎಸ್‍ಪಿ ವಿಶ್ವಂಭರನ್, ಡಿಎಂಒ ಪ್ರತಿನಿಧಿ ಡಾ. ಪ್ರಸಾದ್ ಥಾಮಸ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಿ.ರಾಜ್, ಸಣ್ಣ ನೀರಾವರಿ ಕಾರ್ಯಪಾಲಕ ಅಭಿಯಂತ ಪಿ.ಟಿ.ಸಂಜೀವ್, ಪ್ರಮುಖ ನೀರಾವರಿ ಕಾರ್ಯಪಾಲಕ ಅಭಿಯಂತ ಪಿ. ರಮೇಶ್, ಕೆಎಸ್‍ಇಬಿ ಪ್ರತಿನಿಧಿಗಳು, ತಾಲೂಕು ತಹಸೀಲ್ದಾರರು, ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.