ಕೊಚ್ಚಿ: ಇತ್ತೀಚೆಗಷ್ಟೇ ರಜತ ಮಹೋತ್ಸವ ಸಂಭ್ರಮವನ್ನು ಆಚರಿಸಿಕೊಂಡಿರುವ ಕೊಚ್ಚಿಯ ಅಮೃತ ಆಸ್ಪತ್ರೆ ಇದೀಗ ತನ್ನ ಮತ್ತೊಂದು ಸಾಧನೆ ಕುರಿತು ಅಧಿಕೃತ ಘೋಷಣೆ ಮಾಡಿಕೊಂಡಿದೆ. ದೇಶದಲ್ಲೇ ಮೊದಲ ಹ್ಯಾಂಡ್ ಟ್ರಾನ್ಸ್ಪ್ಲಾಂಟ್ ಮಾಡಿದ್ದ ಖ್ಯಾತಿಗೆ ಒಳಗಾಗಿರುವ ಅಮೃತ ಆಸ್ಪತ್ರೆ ಈಗ ಇನ್ನೊಂದು ಪ್ರಥಮಕ್ಕೂ ಪಾತ್ರವಾಗಿದೆ.
ಆರೋಗ್ಯ ರಕ್ಷಣೆಯಲ್ಲಿ ವಿಸ್ತೃತ ರಿಯಾಲಿಟಿ (ಎಕ್ಸ್ಟೆಂಡೆಡ್ ರಿಯಾಲಿಟಿ-ಎಕ್ಸ್‌ಆರ್) ಅಳವಡಿಸಿಕೊಳ್ಳುವ ಮೂಲಕ ಅಮೃತ ಆಸ್ಪತ್ರೆ ಜಗತ್ತಿನ ಗಮನ ಸೆಳೆದಿದೆ. ಅರ್ಥಾತ್, ಇಂಥದ್ದೊಂದು ತಂತ್ರಜ್ಞಾನ ಅಳವಡಿಸಿಕೊಂಡ ದೇಶದ ಮೊದಲ ಆಸ್ಪತ್ರೆ ಎಂಬ ಖ್ಯಾತಿ ಪಡೆದಿದೆ. ಮಾತ್ರವಲ್ಲ ಇದು ದಕ್ಷಿಣ ಏಷ್ಯಾದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೂ ಭಾಜನವಾಗಿದೆ ಎಂದು ಅಮೃತ ಆಸ್ಪತ್ರೆ ಘೋಷಿಸಿದೆ.
ಆಗ್ಮೆಂಟೆಡ್ ರಿಯಾಲಿಟಿ (ಎಆರ್), ವರ್ಚುವಲ್ ರಿಯಾಲಿಟಿ (ವಿಆರ್), ಮತ್ತು ಮಿಕ್ಸ್ಡ್ ರಿಯಾಲಿಟಿ (ಎಂಆರ್) ತಂತ್ರಜ್ಞಾನಗಳನ್ನು ಒಳಗೊಂಡ ಎಕ್ಸ್ಟೆಂಡೆಡ್ ರಿಯಾಲಿಟಿ (ಎಕ್ಸ್‌ಆರ್) ಮೂಲಕ ಇಲ್ಲಿ ರೋಗಿಗಳ ಆರೈಕೆ, ವೈದ್ಯಕೀಯ ತರಬೇತಿ ಮತ್ತು ಸಂಶೋಧನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಅಮೃತ ಆಸ್ಪತ್ರೆಯ 3ಡಿ ಲ್ಯಾಬ್ಸ್ ಮುಖ್ಯಸ್ಥ ಮತ್ತು ಪೀಡಿಯಾಟ್ರಿಕ್ ಕಾರ್ಡಿಯೊಲಜಿಸ್ಟ್ ಡಾ.ಮಹೇಶ್ ಕಪ್ಪನಾಯಿಲ್ ಇತ್ತೀಚೆಗೆ ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ ಸಹಿತ ವಿವರಣೆ ನೀಡಿದರು.
ಅಮೃತ ಆಸ್ಪತ್ರೆಯಲ್ಲಿ ಎಕ್ಸ್‌ಆರ್ ಅಪ್ಲಿಕೇಷನ್ ಅನುಷ್ಠಾನವು ನಮ್ಮ ಸಂಶೋಧಕರ ತಂಡದ ಹಲವಾರು ವರ್ಷಗಳ ವ್ಯಾಪಕ ಕೆಲಸದ ಫಲಿತಾಂಶವಾಗಿದೆ. ಈ ತಂತ್ರಜ್ಞಾನವನ್ನು ಈಗಾಗಲೇ 150 ರೋಗಿಗಳ ಚಿಕಿತ್ಸೆಯಲ್ಲಿ ಪ್ರಯೋಗಿಸಲಾಗಿದ್ದು, ಅತ್ಯುತ್ತಮ ಫಲಿತಾಂಶ ಕಂಡುಬಂದಿದೆ. ಎಕ್ಸ್‌ಆರ್ ಆರಂಭದಲ್ಲಿ ಗೇಮಿಂಗ್ ಉದ್ಯಮದಲ್ಲಿ ಜನಪ್ರಿಯವಾಗಿತ್ತು. ಈ ಗೇಮಿಂಗ್ ತಂತ್ರಜ್ಞಾನಗಳನ್ನು ವೈದ್ಯಕೀಯದಲ್ಲಿ ಸಂಯೋಜಿಸುವ ಸಂಕೀರ್ಣತೆಯನ್ನು ನಿವಾರಿಸುವುದು ದೊಡ್ಡ ಸವಾಲಾಗಿತ್ತು. ಅದಾಗ್ಯೂ ಅಮೃತ ಆಸ್ಪತ್ರೆಯ ಅಸ್ತಿತ್ವದಲ್ಲಿರುವ 3ಡಿ ಲ್ಯಾಬ್ ಮತ್ತು 3ಡಿ ಪ್ರಿಂಟಿಂಗ್ ಸಾಮರ್ಥ್ಯಗಳನ್ನು ಆಧರಿಸಿ ಈ ಸಾಧನೆ ಮಾಡಲಾಗಿದೆ ಎಂದರು.
ಅಮೃತ ಆಸ್ಪತ್ರೆ ಅಭಿವೃದ್ಧಿಪಡಿಸಿದ ಎಕ್ಸ್‌ಆರ್ ಬೆಂಬಲಿತ ವ್ಯವಸ್ಥೆಯು ವೈದ್ಯಕೀಯ ವೃತ್ತಿಪರರಿಗೆ ಅಂಗಾಂಗಳನ್ನು ಹಾಲೋಗ್ರಾಮ್ ರೀತಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದು ರೋಗಿಗೆ ನಿರ್ದಿಷ್ಟ ಹಾಗೂ ನಿಖರವಾಗಿ ಔಷಧ ತಲುಪಿಸಲು ಸಹಾಯ ಮಾಡುತ್ತದೆ. ಮೆಟಾವರ್ಸ್ ಪರಿಕಲ್ಪನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ರೋಗಿಗಳ ಸಿಟಿ ಸ್ಕ್ಯಾನ್ಗಳಂಥ ಡೇಟಾ ಬಳಸುವ ಮೂಲಕ, ಎಕ್ಸ್‌ಆರ್ ವ್ಯವಸ್ಥೆಯು ವೈದ್ಯರಿಗೆ ಸಂಕೀರ್ಣ ದೋಷಗಳನ್ನು ಅರ್ಥಮಾಡಿಕೊಳ್ಳಲು, ಕಠಿಣ ಶಸ್ತ್ರಚಿಕಿತ್ಸೆಗಳನ್ನು ನಿಖರವಾಗಿ ಯೋಜಿಸಲು ಮತ್ತು ವಿಶ್ವದ ಯಾವುದೇ ಭಾಗದಿಂದ ತಮ್ಮ ಸಹವರ್ತಿಗಳೊಂದಿಗೆ ಚರ್ಚಿಸಿ ಮುಂದುವರಿಯಲು ಅನುವು ಮಾಡಿಕೊಡುತ್ತದೆ. ರೋಗಿಯ ಅನಾರೋಗ್ಯ ಸ್ಥಿತಿ ಕುರಿತು ಚರ್ಚಿಸಲು ಮತ್ತು ಚಿಕಿತ್ಸಾ ಯೋಜನೆಗಳನ್ನು ರೂಪಿಸಲು ರಿಮೋಟ್ ಸಂಪರ್ಕವನ್ನೂ ಬಳಸಿಕೊಳ್ಳಲು ನೆರವಾಗುತ್ತದೆ ಎಂದು ಡಾ.ಮಹೇಶ್ ತಿಳಿಸಿದರು.
ಸರಳವಾಗಿ ಹೇಳುವುದಾದರೆ ರೋಗಿಯ ದೇಹದೊಳಗೇ ಓಡಾಡಿ ಎಲ್ಲಿ ಯಾವ ಸಮಸ್ಯೆ ಇದೆ ಎಂಬುದನ್ನು ಖಚಿತವಾಗಿ ತಿಳಿದುಕೊಳ್ಳಬಹುದು. ಅದಕ್ಕಾಗಿ ಮೊದಲಿಗೆ ಸಿಟಿ ಸ್ಕ್ಯಾನ್ ಮತ್ತಿತರ ಪರೀಕ್ಷೆಗಳ ಮೂಲಕ ರೋಗಿಯ ಸಂಬಂಧಿತ ಅಂಗದ 3ಡಿ ಇಮೇಜ್ ಸೃಷ್ಟಿಸಿ, ನಂತರ ಎಆರ್, ವಿಆರ್, ಎಂಆರ್ಗಳ ಮೂಲಕ ಆ ಅಂಗದ ಯಥಾವತ್ ವಿಸ್ತೃತ ರೂಪವನ್ನು ಸೃಷ್ಟಿಸಿಕೊಳ್ಳಲಾಗುತ್ತದೆ. ಎಕ್ಸ್ಟೆಂಡೆಡ್ ರಿಯಾಲಿಟಿ ಮೂಲಕ ಆ ಅಂಗಾಂಗದ ಒಳಗೇ ನಾವು ಪ್ರವೇಶಿಸಿದಂತೆಯೇ ಹೋಗಿ ಎಲ್ಲಿ ಯಾವ ಸಮಸ್ಯೆ ಇದೆ ಎಂಬುದನ್ನು ನೋಡಬಹುದು. ಇದರಿಂದ ರೋಗಿಯ ಅನಾರೋಗ್ಯದ ಪರಿಸ್ಥಿತಿಯ ಸ್ಪಷ್ಟ ಅರಿವು ಸಿಗುವ ಜತೆಗೆ ಅದಕ್ಕೆ ಏನು ಮಾಡಬೇಕು ಎಂಬುದನ್ನು ಖಚಿತವಾಗಿ ನಿರ್ಧರಿಸಬಹುದು. ಇದರಿಂದ ಸರ್ಜರಿ ಸಂದರ್ಭದಲ್ಲಿನ ಸಮಯ ಉಳಿಯುವುದಷ್ಟೇ ಅಲ್ಲದೆ, ಸರಿಯಾದ ಯೋಜನೆ ಮೊದಲೇ ನಿರ್ಧರಿಸಲು ಸಾಧ್ಯ ಆಗುವುದರಿಂದ ಗೊಂದಲ ಹಾಗೂ ಗಲಿಬಿಲಿಗಳು ಕೂಡ ನಿವಾರಣೆ ಆಗುತ್ತವೆ ಎಂದು ಡಾ.ಮಹೇಶ್ ತಿಳಿಸಿದರು. ರೋಗಿಯ ಹೃದಯದೊಳಗೇ ಹೋಗಿ ನೋಡುವಂತೆ ಭಾಸವಾಗುವ ಎಕ್ಸೆಟೆಂಡೆಡ್ ರಿಯಾಲಿಟಿ ಅನುಭವವನ್ನು ಪತ್ರಕರ್ತರಿಗೆ ಪ್ರಾತ್ಯಕ್ಷಿಕೆ ಮೂಲಕವೇ ಡಾ.ಮಹೇಶ್ ವಿವರಿಸಿದರು.
ನಾವು 3ಡಿ ಇಮೇಜಿಂಗ್ ವ್ಯವಸ್ಥೆ ಬಳಸಿಕೊಂಡು ಹಲವಾರು ಅಪರೂಪದ ಮತ್ತು ವಿಶಿಷ್ಟ ಪ್ರಕರಣಗಳನ್ನು ನಿರ್ವಹಿಸಿದ್ದೇವೆ. ನಾವು ಕೈಗೊಂಡ ಅನೇಕ ಪ್ರಕರಣಗಳು ವಿಶ್ವದಲ್ಲಿ ಅಥವಾ ಭಾರತದಲ್ಲಿ ಮೊದಲನೆಯದಾಗಿವೆ. ಮಾತ್ರವಲ್ಲ, ಅಂಗಗಳ ರಚನಾತ್ಮಕ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಶಸ್ತ್ರಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ಯೋಜಿಸಲು ಹಾಗೂ ವೈದ್ಯರ ನಿರ್ಬಂಧಗಳಿಂದಾಗಿ ಇತರ ಆಸ್ಪತ್ರೆಗಳಿಂದ ತಿರಸ್ಕರಿಸಲ್ಪಟ್ಟ ರೋಗಿಗಳಿಗೆ ಚಿಕಿತ್ಸೆ ನೀಡಲು ನಾವು ಈಗ ಸಮರ್ಥರಾಗಿದ್ದೇವೆ ಎಂದೂ ಡಾ.ಮಹೇಶ್ ತಿಳಿಸಿದರು.
ಎಕ್ಸ್ಟೆಂಡೆಡ್ ರಿಯಾಲಿಟಿ ಬಗ್ಗೆ ವಿವರಿಸುತ್ತಿರುವ ಡಾ.ಮಹೇಶ್.
ಅಮೃತ ಆಸ್ಪತ್ರೆಯ ಮಕ್ಕಳ ಹೃದ್ರೋಗ ಘಟಕವು ರೋಗಿಗಳ ಕ್ಲಿನಿಕಲ್ ಪ್ರಯೋಜನಕ್ಕಾಗಿ 3ಡಿ ಪ್ರಿಂಟಿಂಗ್ ಮತ್ತು ವಿಸ್ತರಿತ ರಿಯಾಲಿಟಿ (ಎಆರ್/ವಿಆರ್) ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಈ ಅತ್ಯಾಧುನಿಕ 3ಡಿ+ ತಂತ್ರಜ್ಞಾನಗಳು ವೈದ್ಯರಿಗೆ ನಿಜವಾದ ಹೃದಯ ಅಥವಾ ಯಾವುದೇ ಅಂಗದ ನಿಖರವಾದ ಪ್ರತಿಕೃತಿಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ, ನಿಜವಾದ ಶಸ್ತ್ರಚಿಕಿತ್ಸೆಗೆ ಮೊದಲು ಆಳವಾದ ಅಧ್ಯಯನ ಮತ್ತು ಸಿದ್ಧತೆಯನ್ನು ಸುಗಮಗೊಳಿಸುತ್ತದೆ. ನಿಖರವಾದ ಶಸ್ತ್ರಚಿಕಿತ್ಸಾ ಯೋಜನೆ, ಕಸ್ಟಮೈಸ್ಡ್ ಪ್ರಾಸ್ಥೆಟಿಕ್ಸ್ ಮತ್ತು ಇಂಪ್ಲಾಂಟ್ಗಳು, ನವೀನ ವೈದ್ಯಕೀಯ ಸಾಧನಗಳ ಅಭಿವೃದ್ಧಿ ಮತ್ತು ವರ್ಧಿತ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಸಕ್ರಿಯಗೊಳಿಸುವ ಮೂಲಕ ಈ ತಂತ್ರಜ್ಞಾನಗಳು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಉಂಟು ಮಾಡಲು ಸಜ್ಜಾಗಿವೆ ಎಂದು ಕೊಚ್ಚಿ ಅಮೃತ ಆಸ್ಪತ್ರೆಯ ಮಕ್ಕಳ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಕೃಷ್ಣಕುಮಾರ್ ತಿಳಿಸಿದರು.
ಉಗಾಂಡದ ಮೂರೂವರೆ ವರ್ಷದ ಬಾಲಕಿಗೆ 2022ರಲ್ಲಿ ಚಿಕಿತ್ಸೆ ನೀಡುವ ಮೂಲಕ ಪ್ರಪ್ರಥಮ ಬಾರಿಗೆ ಈ ಎಕ್ಸ್‌ಆರ್ ತಂತ್ರಜ್ಞಾನವನ್ನು ಪ್ರಯೋಗಿಸಲಾಯಿತು. ಆಕೆಯದ್ದು ಅತ್ಯಂತ ಸಂಕೀರ್ಣ ಸಮಸ್ಯೆಯಾದ್ದರಿಂದ ಎಲ್ಲ ಆಸ್ಪತ್ರೆಗಳಿಂದ ತಿರಸ್ಕರಿಸಲ್ಪಟ್ಟರೂ ಈ ವಿಶಿಷ್ಟ ತಂತ್ರಜ್ಞಾನದಿಂದಾಗಿ ಸರಿಯಾದ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಾಯಿತು ಎಂದು ಅಮೃತ ಆಸ್ಪತ್ರೆಯ ಹೃದಯರಕ್ತನಾಳ ಮತ್ತು ಎದೆ ಶಸ್ತ್ರಚಿಕಿತ್ಸೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬ್ರಿಜೇಶ್ ಪಿ. ಕೊಟ್ಟಾಯಿಲ್ ತಿಳಿಸಿದರು.
ಅಮೃತ ಆಸ್ಪತ್ರೆಯು 2015ರಿಂದ 3ಡಿ ಪ್ರಿಂಟಿಂಗ್ ಬಳಸುತ್ತಿದೆ. ಎದೆಯ ಭಾಗದಲ್ಲಿನ ಒಂದು ಮೂಳೆ ಮೂಡಿರದ ಮಗುವಿನ ಹೃದಯ ಬಡಿದುಕೊಳ್ಳುವಾಗ ಎದೆಯ ಮೇಲ್ಭಾಗಕ್ಕೆ ಒತ್ತಿಕೊಳ್ಳುತ್ತಿತ್ತು. ಹೀಗಾಗಿ ಮಗುವನ್ನು ಎತ್ತಿಕೊಳ್ಳಲೂ ಮನೆಯವರು ಭಯಪಡಬೇಕಾದ ಸನ್ನಿವೇಶವಿತ್ತು. ಅಂಥ ಒಂದು ಕ್ಲಿಷ್ಟ ಆರೋಗ್ಯ ಸಮಸ್ಯೆಯನ್ನೂ 3ಡಿ ಪ್ರಿಂಟಿಂಗ್ ತಂತ್ರಜ್ಞಾನದ ಮೂಲಕ ಬಗೆಹರಿಸಲಾಗಿತ್ತು ಎಂದು ಆಸ್ಪತ್ರೆಯ ಸಮೂಹ ವೈದ್ಯಕೀಯ ನಿರ್ದೇಶಕ ಡಾ.ಪ್ರೇಮ್ ನಾಯರ್ ತಿಳಿಸಿದರು.