ಡೆಹ್ರಾಡೂನ್: ಭಾರಿ ಮಳೆ ಹಿನ್ನಲೆಯಲ್ಲಿ ಪವಿತ್ರ ಕೇದಾರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ರುದ್ರಪ್ರಯಾಗ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಯೂರ್ ದೀಕ್ಷಿತ್ ಮಾಹಿತಿ ನೀಡಿದ್ದು, ರುದ್ರಪ್ರಯಾಗ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಸೋನ್‌ಪ್ರಯಾಗದಲ್ಲಿ ಕೇದಾರನಾಥ ಯಾತ್ರೆಯನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಉತ್ತರ ಭಾರತದಲ್ಲಿ ಮಾನ್ಸೂನ್ ಮಾರುತಗಳು ಪ್ರವೇಶ ಮಾಡಿದ್ದು, ಅಸ್ಸಾಂ, ಉತ್ತರಾಖಂಡ, ಹಿಮಾಚಲ ಪ್ರದೇಶ, ಮ್ಮು ಮತ್ತು ಕಾಶ್ಮೀರ ಸೇರಿದಂತೆ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಪ್ರಮುಖವಾಗಿ ಉತ್ತರಾಖಂಡದಲ್ಲಿ ಮಳೆ ಮುಂದುವರೆದಿದ್ದು, ಹರಿದ್ವಾರದಲ್ಲಿ ಕಳೆದ 24 ಗಂಟೆಗಳಲ್ಲಿ 78 ಮಿಮೀ ಮಳೆಯಾಗಿದೆ. ಅಂತೆಯೇ ರಾಜಧಾನಿ ಡೆಹ್ರಾಡೂನ್ 33.2 ಮಿ.ಮೀ ಮಳೆಯಾಗಿದ್ದು, ಉತ್ತರಕಾಶಿ 27.7ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ ಐದು ದಿನಗಳ ಕಾಲ ಪೂರ್ವ ಮಧ್ಯ ಮತ್ತು ವಾಯುವ್ಯ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದಲ್ಲದೆ, ನೈಋತ್ಯ ಮಾನ್ಸೂನ್ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಛತ್ತೀಸ್‌ಗಢ, ಪೂರ್ವ ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶಗಳಿಗೆ ಮುನ್ನುಗ್ಗುತ್ತಿದೆ.
ಈಶಾನ್ಯ ಮತ್ತು ಪಕ್ಕದ ಭಾರತದ ಬಗ್ಗೆ ಮಾತನಾಡುವುದಾದರೆ, ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಇದರಲ್ಲಿ ಜೂನ್ 25-26 ರಂದು ಒಡಿಶಾದಲ್ಲಿ ಭಾರೀ ಮಳೆಯಾಗಲಿದೆ. ಅದೇ ಸಮಯದಲ್ಲಿ, ಜೂನ್ 25 ಮತ್ತು 26 ರಂದು ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಇದೆ. ಇದಲ್ಲದೆ, ಜೂನ್ 24 ಮತ್ತು 25 ರ ನಡುವೆ ಗಂಗಾನದಿ ಪಶ್ಚಿಮ ಬಂಗಾಳ, ಜೂನ್ 25-28 ರ ನಡುವೆ ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ಇದೆ.