ಸ್ವೀಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಪ್ರತಿನಿತ್ಯ ಸ್ವೀಟ್ ತಿನ್ನದೇ ಇರೋದಿಲ್ಲ. ಇನ್ನೂ ಕೆಲವರಿಗಂತೂ ಊಟ ಆದ್ಮೇಲೆ ಜಾಮೂನ್, ಪೇಸ್ಟ್ರೀ, ಇಲ್ಲವಾದರೆ ಯಾವುದಾದರೂ ಚಾಕಲೇಟ್ ಸೇವಿಸಲೇಬೇಕು. ಸ್ವೀಟ್ ತಿನ್ನೋದಕ್ಕೆ ಎಷ್ಟು ರುಚಿಕರವಾಗಿರುತ್ತೋ, ಆದ್ರೆ ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ.
ಇನ್ನೂ ಡಯಾಬಿಟಿಸ್ ಇರೋರಂತೂ ಸಿಹಿಯನ್ನು ಮುಟ್ಟಲೇಬಾರದು. ಆದ್ರೆ ಬಾಯಿ ಚಪಲ ಸ್ವೀಟ್ ತಿನ್ನದೇ ಇರೋದಕ್ಕೆ ಆಗುತ್ತಾ? ಇಂತಹ ಸಂದರ್ಭದಲ್ಲಿ ನೀವು ಸ್ವೀಟ್ ಗೆ ಬದಲಾಗಿ ಕೆಲವೊಂದು ಹಣ್ಣುಗಳನ್ನು ಸೇವನೆ ಮಾಡಬಹುದು. ಈ ಹಣ್ಣುಗಳು ನಿಮ್ಮ ಸಿಹಿ ತಿನ್ನುವ ಆ ಬಯಕೆಯನ್ನು ಈಡೇರಿಸುತ್ತದೆ. ಅಷ್ಟಕ್ಕು ಆ ಹಣ್ಣುಗಳು ಯಾವುದು ಅಂತ ತಿಳಿದುಕೊಳ್ಳೋಣ.1. ಸೀಬೆ ಹಣ್ಣು
ಸೀಬೆ ಹಣ್ಣಿನ ಜೊತೆಗೆ ನಮ್ಮ ಅನೇಕ ಬಾಲ್ಯದ ನೆನಪುಗಳು ಬೆಸೆದುಕೊಂಡಿದೆ. ಚಿಕ್ಕದಿರಬೇಕಾದರೆ ದುಡ್ಡು ಕೊಡದೇ ಯಾವುದಾದರೂ ಹಣ್ಣು ಉಚಿತವಾಗಿ ಲಭ್ಯವಾಗುತ್ತಿತ್ತು ಅಂದ್ರೆ ಅದು ಸೀಬೆ ಹಣ್ಣು. ಇದು ಆರೋಗ್ಯದ ದೃಷ್ಟಿಯಿಂದಲೂ ತುಂಬಾನೇ ಒಳ್ಳೆಯದು. ನಿಯಮಿತವಾಗಿ ಸೀಬೆ ಹಣ್ಣನ್ನು ತಿನ್ನೋದ್ರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತಂತೆ. ಇನ್ನೂ ಸೀಬೆ ಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶ ಇರೋದ್ರಿಂದ ಇದನ್ನು ತಿಂದ್ರೆ ದೀರ್ಘ ಕಾಲ ನಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗೂ ನಮ್ಮ ಸಿಹಿ ತಿನ್ನುವ ಬಯಕೆಯನ್ನೂ ಕೂಡ ಈ ಹಣ್ಣು ಈಡೇರಿಸುತ್ತದೆ.
2. ಕರ್ಬೂಜ ಹಣ್ಣು ಸಾಮಾನ್ಯವಾಗಿ ಕರ್ಬೂಜ ಹಣ್ಣು ಬೇಸಿಗೆ ಕಾಲದಲ್ಲಿ ಲಭ್ಯವಾಗುತ್ತದೆ. ಬಿಸಿಲಿನ ಬೇಗೆಗೆ ಕರ್ಬೂಜ ಹಣ್ಣು ಸೇವನೆ ಮಾಡೋದ್ರಿಂದ ಒಂದು ರೀತಿ ಹಾಯಾದ ಅನುಭವವಾಗುತ್ತದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸಲು ತುಂಬಾನೇ ಒಳ್ಳೆಯದು. ಕರ್ಬೂಜ ಹಣ್ಣು ತಿನ್ನೋದಕ್ಕೆ ತುಂಬಾನೇ ಸಿಹಿಯಾಗಿರುತ್ತದೆ. ಹಾಗೂ ಇದ್ರಲ್ಲಿ ಕ್ಯಾಲೊರಿ ಅಂಶ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಸಿಹಿ ತಿನ್ನಬೇಕು ಅನ್ನಿಸಿದಾಗೆಲ್ಲಾ ಖರ್ಬೂಜ ಹಣ್ಣನ್ನು ಸೇವನೆ ಮಾಡಿದರೆ ಒಳ್ಳೆಯದು. ಇದು ತೂಕ ಇಳಿಸೋದಕ್ಕೂ ಸಹಾಯ ಮಾಡುತ್ತದೆ.
3. ಕಲ್ಲಂಗಡಿ ಹಣ್ಣು
ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣನ್ನು ತಿನ್ನದೇ ಇರೋರು ಯಾರು ಇಲ್ಲ ಅನ್ನಿಸುತ್ತೆ. ದೇಹವನ್ನು ಡಿಹೈಡ್ರೇಟ್ ಮಾಡೋದಕ್ಕೆ ಕಲ್ಲಂಗಡಿ ಅತ್ಯತ್ತಮ ಹಣ್ಣು ಅಂತಾನೇ ಹೇಳಬಹುದು. ಅಧಿಕ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣು ಸಕ್ಕರೆಗಿಂತಾನೂ ತುಂಬಾನೇ ಸಿಹಿಯಾಗಿದೆ. ಹೀಗಾಗಿ ಸಿಹಿ ತಿನ್ನಬೇಕು ಅಂದಾಗಲೆಲ್ಲಾ ಕೃತಕ ಸ್ವೀಟ್ ಗಳನ್ನು ಸೇವನೆ ಮಾಡುವ ಬದಲು ಕಲ್ಲಂಗಡಿ ನಿಮಗೆ ಅತ್ಯತ್ತಮ ಆಯ್ಕೆಯಾಗಿದೆ.
4. ಮರಸೇಬು (Pear)
ಮರಸೇಬು ನೋಡೋದಕ್ಕೆ ಸೇಬು ಹಣ್ಣಿನ ಆಕಾರ ಇಲ್ಲದಿದ್ದರೂ ಕೂಡ ರುಚಿ ಮಾತ್ರ ಕೊಂಚ ಸೇಬು ಹಣ್ಣಿನ ರೀತಿಯಲ್ಲೇ ಇದೆ. ಮರಸೇಬನ್ನು ನಿಯಮಿತವಾಗಿ ಸೇವನೆ ಮಾಡೋದ್ರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಮರಸೇಬು ಆರೋಗ್ಯದ ದೃಷ್ಟಿಯಿಂದ ಉತ್ತಮ ಮಾತ್ರವಲ್ಲದೇ ರುಚಿಕರವೂ ಆಗಿದೆ.
ಸಿಹಿ ಸೇವನೆ ಮಾಡಬೇಕು ಅನ್ನುವವರು ಮರಸೇಬು ತಿಂದು ತಮ್ಮ ಬಯಕೆ ಈಡೇರಿಸಿಕೊಳ್ಳಬಹುದು. ಮರಸೇಬಿನಲ್ಲಿ ಫೈಬರ್ ಅಧಿಕವಾಗಿದೆ. ಇದು ದೇಹದ ಕೊಬ್ಬನ್ನು ಕಡಿಮೆ ಮಾಡಲು ನೆರವಾಗುತ್ತದೆ. ಜೊತೆಗೆ ದೇಹದ ತೂಕ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯಕಾರಿಯಾಗಿದೆ.
5. ಮಾವಿನ ಹಣ್ಣು
ಮಾವಿನ ಹಣ್ಣು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮಾವಿನ ಹಣ್ಣು "ಹಣ್ಣುಗಳ ರಾಜ" ಎಂಬ ಬಿರುದು ಪಡೆದುಕೊಂಡಿದೆ. ನಮ್ಮ ಆರೋಗ್ಯಕ್ಕೆ ತುಂಬಾನೇ ಉಪಯೋಗಕಾರಿ ಹಣ್ಣು ಇದು. ಮಾವಿನ ಹಣ್ಣು ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿದ ಹಣ್ಣಾಗಿದೆ. ಇದು ಫೈಬರ್ ಮತ್ತು ವಿಟಮಿನ್ ಸಿ, ಎ, ಇ ಮತ್ತು ಕೆ ಸೇರಿದಂತೆ ವಿವಿಧ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ.
ದಿನನಿತ್ಯ ಒಂದು ಮಾವಿನ ಹಣ್ಣನ್ನು ಸೇವನೆ ಮಾಡೋದ್ರಿಂದ ಇದು ನಮ್ಮ ದಿನಪೂರ್ತಿ ಶಕ್ತಿಯುತವಾಗಿ ಇಡೋದಕ್ಕೆ ನೆರವಾಗುತ್ತದೆ. ಇದು ಸಕ್ಕರೆಯ ಕಡುಬಯಕೆಗಳನ್ನು ಹತೋಟಿಯಲ್ಲಿಡಲು ಮತ್ತು ಮನಸ್ಥಿತಿಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇನ್ನೂ ಮಾವಿನ ಹಣ್ಣು ಲಭ್ಯವಿರೋ ಋತುಮಾನದಲ್ಲಿ ಮಾತ್ರ ಈ ಹಣ್ಣನ್ನು ಸೇವಿಸಿ.
6. ಕರ್ಜೂರ
ಕರ್ಜೂರ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಇದು ಬಾಯಲ್ಲಿಟ್ಟರೆ ಕರಗುತ್ತದೆ ಹಾಗೂ ಸಕ್ಕರೆಗಿಂತಲೂ ಸಿಹಿಯಾಗಿರೋ ಹಣ್ಣು. ಇದರಲ್ಲಿ ನೈಸರ್ಗಿಕವಾದ ಫೈಬರ್, ಪೊಟ್ಯಾಶಿಯಂ, ಆಂಟಿಆಕ್ಸಿಡೆಂಟ್ ಅಂಶ ಅಧಿಕ ಪ್ರಮಾಣದಲ್ಲಿ ಇದೆ. ಪ್ರತಿನಿತ್ಯ ಇದನ್ನು ಸೇವಿಸೋದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಪ್ರಯೋಜನಕಾರಿ. ತೂಕ ಹೆಚ್ಚಿಸೋದಕ್ಕೆ ಇದು ಸಹಾಯ ಮಾಡುತ್ತದೆ. ಅತಿಯಾದ ಸಿಹಿ ಬಯಕೆ ಇರುವವರು ನಿತ್ಯ ಒಂದೆರಡು ಖರ್ಜೂರ ತಿಂದರೆ ಒಳ್ಳೆಯದು.
ಈ ಎಲ್ಲಾ ಹಣ್ಣುಗಳು ನಿಮ್ಮ ಸಿಹಿ ತಿನ್ನುವ ಬಯಕೆಯನ್ನು ಸಂಪೂರ್ಣವಾಗಿ ಈಡೇರಿಸುತ್ತದೆ. ಡಯಾಬಿಟಿಸ್ ಇರುವವರೂ ಕೂಡ ಈ ಹಣ್ಣುಗಳನ್ನು ಯಾವುದೇ ಚಿಂತೆಯಿಲ್ಲದೇ ಸೇವನೆ ಮಾಡಬಹುದು.