ವಾಷಿಂಗ್ಟನ್ ಡಿಸಿ: ಜನಪ್ರತಿನಿಧಿಗಳು ವಿದೇಶಗಳಿಗೆ ಹೋದಾಗ ಅಲ್ಲಿನ ಗಣ್ಯರು, ಅಧ್ಯಕ್ಷರು, ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಏರ್ಪಡಿಸುವ ಔತಣ ಕೂಟಗಳಲ್ಲಿ ಡ್ರಿಂಕ್ಸ್ ತೆಗೆದುಕೊಳ್ಳುವುದು ಸಾಮಾನ್ಯ. ವಿದೇಶಗಳಲ್ಲಿ ಆಲ್ಕೋಹಾಲ್ ಸೇವಿಸುವುದು ಪ್ರತಿಷ್ಠೆಯ ವಿಷಯ.
ಕಳೆದ ಮೂರು ದಿನಗಳಿಂದ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಲ್ಲಿನ ಆಡಳಿತ ಶಕ್ತಿ ಕೇಂದ್ರ ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡನ್ ಅವರು ಔತಣ ಕೂಟ ಏರ್ಪಡಿಸಿದ್ದರು. ಮೋದಿಯವರ ಜೊತೆ ಸುಮಾರು 400 ಮಂದಿ ಪ್ರಮುಖ ಗಣ್ಯರಿಗೆ ಆಹ್ವಾನವಿತ್ತು.
ವೇದಿಕೆ ಮೇಲೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎರಡು ದೇಶಗಳ ನಡುವಿನ ಸಂಬಂಧ, ಸೌಹಾರ್ದತೆ. ದ್ವಿಪಕ್ಷೀಯ ಮಾತುಕತೆ, ನಡೆದುಕೊಂಡ ಬಂದ ಹಾದಿ ಬಗ್ಗೆ ವಿಮರ್ಶೆ ಮಾಡಿ ಪರಸ್ಪರ ಶ್ಲಾಘಿಸಿದರು. ಸಾಂಪ್ರದಾಯಿಕವಾಗಿ ಅಮೆರಿಕ ಅಧ್ಯಕ್ಷರು ಪ್ರಧಾನಿ ಮೋದಿಗೆ ಟೋಸ್ಟ್(Toast) ನೀಡಿದರು. ಟೋಸ್ಟ್ ಎಂದರೆ ಗ್ಲಾಸಿನಲ್ಲಿ ಆಲ್ಕೋಹಾಲ್ ಸುರಿದು ಚಿಯರ್ಸ್ ಎಂದು ಸಂಭ್ರಮಿಸಿ ಮದ್ಯಪಾನ ಮಾಡುವುದು.
ಮಾಂಸಾಹಾರಿ, ಮದ್ಯ ವರ್ಜ್ಯ ಪ್ರಧಾನಿ ಮೋದಿ: ಹೇಳಿಕೇಳಿ ಪ್ರಧಾನಿ ನರೇಂದ್ರ ಮೋದಿಯವರು ಮದ್ಯ, ಮಾಂಸ ಸೇವನೆಯಿಂದ ದೂರ. ಕಟ್ಟುನಿಟ್ಟಿನ ಆಹಾರ ಸೇವನೆ, ಜೀವನ ಶೈಲಿ ಪಾಲಿಸುವವರು. ವಿದೇಶಗಳಿಗೆ ಹೋದರೂ ಮದ್ಯ, ಆಲ್ಕೋಹಾಲ್ ಮುಟ್ಟುವವರಲ್ಲ. ಅಚ್ಚರಿಯೆಂಬಂತೆ ಅಮೆರಿಕ ಅಧ್ಯಕ್ಷ 80 ವರ್ಷದ ಜೋ ಬೈಡನ್ ಅವರಿಗೂ ಆಲ್ಕೋಹಾಲ್ ಸೇವಿಸುವ ಅಭ್ಯಾಸವಿಲ್ಲವಂತೆ.
ಶುಂಠಿ ಗ್ರೀನ್ ಟೀ ಸೇವಿಸಿದ ಮೋದಿ: ಆದರೆ ಅಮೆರಿಕ ಸಂಪ್ರದಾಯದಂತೆ ವೈನ್ ಗ್ಲಾಸಿನಲ್ಲಿ ಮೋದಿಯವರಿಗೆ ಶುಂಠಿ ಹಾಕಿದ ಗ್ರೀನ್ ಟೀ(Ginger tea)ಯನ್ನು ನೀಡಿದರು. ಜೋ ಬೈಡನ್ ಅವರು ಗ್ಲಾಸಿನಲ್ಲಿ ನೀರು ಹಿಡಿದು ತಮ್ಮ ತಾತ ಹೇಳಿದ ಮಾತುಗಳನ್ನು ನೆನಪಿಸಿಕೊಂಡರು. 'ನನ್ನ ತಾತ ಆಂಬ್ರೊಸ್ ಫಿನ್ನೆಗಾನ್ ಒಂದು ಮಾತು ಹೇಳುತ್ತಿದ್ದರು. ನೀವು ಮತ್ತೊಬ್ಬರಿಗೆ ಟೋಸ್ಟ್ ನೀಡಿ ಅದರಲ್ಲಿ ಆಲ್ಕೋಹಾಲ್ ಇರದಿದ್ದರೆ ಎಡಗೈಯಿಂದ ಚಿಯರ್ಸ್ ಎನ್ನಬೇಕು ಎಂದು ಸಲಹೆ ನೀಡಿದ್ದರು. ಅದರಂತೆ ನಾನು ಇಂದು ಮೋದಿಯವರಿಗೆ ಎಡಗೈಯಿಂದ ಚಿಯರ್ಸ್ ಎನ್ನುತ್ತೇನೆ, ನಾನು ತಮಾಷೆಗೆ ಹೇಳುತ್ತಿಲ್ಲ ಎಂದು ಚಿಯರ್ಸ್ ಎಂದರು.
ಆಗ ಮೋದಿಯವರಿಗೆ ನಗು ಬಂತು. ನೆರೆದಿದ್ದವರು ಕೂಡ ನಗೆ ಚೆಲ್ಲಿದರು. ಇನ್ನು ಬೈಡನ್ ಅವರ ಮಾತುಗಳನ್ನು ಭಾಷಾಂತರಗಾರ್ತಿ ಹಿಂದಿಗೆ ತರ್ಜುಮೆ ಮಾಡಿ ಹೇಳಿದಾಗಲಂತೂ ಮೋದಿ ಸೇರಿದಂತೆ ಅತಿಥಿಗಳಿಗೆ ನಗೆಯುಕ್ಕಿ ಬಂತು.