HEALTH TIPS

'ಸಂತಾಲಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ಕೊಡಿಸುವಲ್ಲಿ ಮುರ್ಮು ಪಾತ್ರ ಮಹತ್ವದ್ದು'

 ವದೆಹಲಿ : 'ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಡಿಶಾ ಸಚಿವರಾಗಿದ್ದಾಗ ತಮ್ಮ ಮಾತೃ ಭಾಷೆ 'ಸಂತಾಲಿ'ಯನ್ನು 2003ರಲ್ಲಿ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಮನವೊಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು' ಎಂದು ಭುವನೇಶ್ವರ ಮೂಲದ ಪತ್ರಕರ್ತ ಸಂದೀಪ್ ಸಾಹು ಅವರು ತಾವು ಬರೆದ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ದ್ರೌಪದಿ ಮುರ್ಮು ಅವರು ಮಂಗಳವಾರದಂದು ತಮ್ಮ 65ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ, ಸಂದೀಪ್‌ ಅವರು ಬರೆದ ಮುರ್ಮು ಅವರ ಜೀವನಚರಿತ್ರೆ 'ಮೇಡಂ ಪ್ರೆಸಿಡೆಂಟ್‌: ದಿ ಬಯೋಗ್ರಫಿ ಆಫ್‌ ದ್ರೌಪದಿ ಮುರ್ಮು' ಎಂಬ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದೆ. ಪುಸ್ತಕದಲ್ಲಿ ಸಂದೀಪ್‌ ಈ ಘಟನೆ ಕುರಿತು ವಿವರಿಸಿದ್ದಾರೆ.

'ಸಂತಾಲಿ ಭಾಷೆಯ ಕುರಿತಾಗಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರೊಂದಿಗೆ ಮುರ್ಮು ಹಲವಾರು ಬಾರಿ ಮಾತನಾಡಿದ್ದರು. 'ಸಂತಾಲಿ' ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಬುಡಕಟ್ಟು ಸಲಹಾ ಮಂಡಳಿಯಲ್ಲಿ ಪಡೆದಿದ್ದರು' ಎಂದು ಪುಸ್ತಕದಲ್ಲಿ ಮಾಹಿತಿ ನೀಡಿದ್ದಾರೆ.

'2000ದಿಂದ 2004ರವರೆಗೆ ಒಡಿಶಾದ ಬಿಜೆಡಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವೆಯಾಗಿದ್ದ ಮುರ್ಮು ಅವರು ವಾಜಪೇಯಿ ಅವರೊಂದಿಗೆ ಚರ್ಚೆ ನಡೆಸಿ, ಸಂತಾಲಿ ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ ಸಫಲರಾದರು. ಮುರ್ಮು ಅವರು ವಾಜಪೇಯಿ ಅವರನ್ನು ಭೇಟಿಯಾಗಲು ಬಾಲೇಶ್ವರದ ಆಗಿನ ಸಂಸದರಾಗಿದ್ದ ಎಂ.ಎ. ಖಾರವೇಲಾ ಸ್ವೇನ್‌ ಅವರನ್ನು ಸಂಪರ್ಕಿಸಿದ್ದರು' ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ಮುರ್ಮು ಅವರು ಎಂ.ಎ. ಖಾರವೇಲಾ ಸ್ವೇನ್‌ ಹಾಗೂ ತಮ್ಮ ಆಪ್ತ ಕಾರ್ಯದರ್ಶಿಯೊಡನೆ ವಾಜಪೇಯಿ ಅವರನ್ನು ಭೇಟಿಯಾಗಿ, ಅವರಿಗೆ ಪರಿಮಳ್‌ ಚಂದ್ರ ಮಿತ್ರಾ ಅವರು ಬರೆದ 'ಸಂತಾಲಿ: ದಿ ಬೇಸ್‌ ಆಫ್‌ ವರ್ಲ್ಡ್‌ ಲ್ಯಾಂಗ್ವೇಜಸ್‌' ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದನ್ನೂ ನಮೂದಿಸಲಾಗಿದೆ.

'ಅಂದಿನ ದಿನ ನಮಗೆ ವಾಜಪೇಯಿ ಅವರನ್ನು ಭೇಟಿಯಾಗಲು ಕೇವಲ 10 ನಿಮಿಷಗಳಲ್ಲಿ ಅನುಮತಿ ಸಿಕ್ಕಿತು. ಇದಕ್ಕಾಗಿ ಖಾರಾವೇಲಾ ಅವರಿಗೆ ಧನ್ಯವಾದಗಳು. ನಾನು ಉಡುಗೊರೆಯಾಗಿ ಕೊಟ್ಟ ಪುಸ್ತಕದ ಮೇಲೆ ಕಣ್ಣಾಡಿಸಿದ ವಾಜಪೇಯಿ ಅವರು, 'ಅಚ್ಚಾ' (ಒಳ್ಳೆಯದು) ಎಂದರು. ಭಾರತದ ಇತರ ಭಾಷೆಗಳಂತೆ 'ಸಂತಾಲಿ'ಯಲ್ಲಿ ಯಾವುದೇ ರೀತಿಯ ವ್ಯಾಕರಣದ 'ಮಾತ್ರೆ'ಗಳಿಲ್ಲ ಎಂದು ನಾನು ಹೇಳಿದಾಗ ಅವರು ತುಂಬಾ ಪ್ರಭಾವಿತರಾದರು. 'ಸಂತಾಲಿ'ಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವುದಾಗಿ ಅವರು ಭರವಸೆ ನೀಡಿದ್ದರು' ಎಂದು ಮುರ್ಮು ಅವರು ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಮುರ್ಮು ಅವರು ಪ್ರಧಾನಿ ಅವರನ್ನು ಭೇಟಿಯಾದ ಆರು ತಿಂಗಳ ಬಳಿಕ 'ಸಂತಾಲಿ'ಯು ಸಂವಿಧಾನದ ಮನ್ನಣೆ ಸಿಕ್ಕು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಯಿತು.

2011ರ ಗಣತಿಯ ಪ್ರಕಾರ ಒಡಿಶಾ, ಪಶ್ಚಿಮ ಬಂಗಾಳ, ತ್ರಿಪುರಾ, ಮಿಜೋರಾಂ, ಝಾರ್ಖಂಡ್‌, ಬಿಹಾರ್‌ಗಳಲ್ಲಿ 70ಲಕ್ಷಕ್ಕಿಂತ ಹೆಚ್ಚು ಜನರು 'ಸಂತಾಲಿ' ಭಾಷೆಯನ್ನು ಮಾತನಾಡುತ್ತಾರೆ.

1925ರಲ್ಲಿ ಬುಡಕಟ್ಟು ವಿದ್ವಾಂಸರಾದ ಪ‍ಂಡಿತ್‌ ರಘುನಾಥ್‌ ಮುರ್ಮು ಅವರು ಸಂತಾಲಿ ಭಾಷೆಗೆ ಒಲ್‌ ಚಿ.ಕಿ ಲಿಪಿಯನ್ನು ಅಭಿವೃದ್ಧಿಪಡಿಸಿದರು. ಇದು 'ಸಂತಾಲಿ'ಗೆ ಇರುವಂಥ ಬರವಣಿಗೆ ವ್ಯವಸ್ಥೆ.

ಮುರ್ಮುಗೆ ಶುಭಕೋರಿದ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರು ದ್ರೌಪದಿ ಮುರ್ಮು ಅವರಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. 'ರಾಷ್ಟ್ರಪತಿ ಅವರಿಗೆ ಜನ್ಮದಿನದ ಶುಭಾಶಯಗಳು. ನಮ್ಮ ಜನರ ಕಲ್ಯಾಣಕ್ಕಾಗಿ ಬುದ್ಧಿವಂತಿಕೆಯ ಘನತೆಯ ದಾರಿದೀಪ ಮುರ್ಮು ಅವರಾಗಿದ್ದಾರೆ. ದೇಶದ ಪ್ರಗತಿಯಲ್ಲಿ ಅವರು ಪಟ್ಟ ಶ್ರಮದಿಂದಾಗಿ ಮೆಚ್ಚುಗೆ ಪಡೆದಿದ್ದಾರೆ. ಅವರ ಬದ್ಧತೆ ನಮಗೆ ಯಾವಾಗಲೂ ಸ್ಪೂರ್ತಿ' ಎಂದು ಮೋದಿ ಅವರು ಟ್ವೀಟ್‌ ಮಾಡಿದ್ದಾರೆ. ಇವರೊಂದಿಗೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಬೌದ್ಧ ಧರ್ಮಗುರು ದಲೈಲಾಮಾ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಇತರರು ಮುರ್ಮು ಅವರಿಗೆ ಶುಭಾಶಯ ಕೋರಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries