ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಚುಕ್ಕಾಣಿ ಹಿಡಿದ ಮೇಲೆ ಜಾಗತಿಕ ಮಟ್ಟದಲ್ಲಿ ಭಾರತದ ವರ್ಚಸ್ಸು ಅಮೂಲಾಗ್ರವಾಗಿ ಹೆಚ್ಚಾಗಿದೆ ಎಂದು ಬಿಜೆಪಿ ಕೊಂಡಾಡಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಹ್ವಾನದ ಮೇರೆಗೆ ಮೋದಿಯವರು ಅಮೆರಿಕ ಪ್ರವಾಸ ಕೈಗೊಂಡಿದ್ದರು.
'2014-15ರಲ್ಲಿ 64.26 ಶತಕೋಟಿಗಳಷ್ಟಿದ್ದ ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟು ಕಳೆದ ಒಂಬತ್ತು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. 2022-23ರಲ್ಲಿ ಇದು 108.43 ಶತಕೋಟಿಗಳಿಗೆ ವೃದ್ಧಿಸುವ ಮೂಲಕ ಬಹುತೇಕ ಶೇ 69ರಷ್ಟು ಬೆಳವಣಿಗೆ ದಾಖಲಿಸಿದೆ. ಈ ವಹಿವಾಟು ಹೆಚ್ಚಳಕ್ಕೆ ಪ್ರಧಾನಿ ಮೋದಿ ಅವರ ಸೂಕ್ಷ್ಮಪ್ರಜ್ಞೆಯೇ ಕಾರಣ ಎಂಬುದಕ್ಕೆ ಅಮೆರಿಕದ ಉದ್ಯಮಿಗಳು ಮೋದಿಯವರ ಭೇಟಿಗೆ ಅತ್ಯುತ್ಸಾಹದಿಂದ ಕಾದುನಿಂತಿದ್ದರು. ಅಮೆರಿಕದ ಕಂಪನಿಗಳಿಗೆ ಭಾರತದ ಖಾಸಗಿ ವಲಯದ ಜತೆಗೂ ಕೈಜೋಡಿಸುವ ಉತ್ಸಾಹದಲ್ಲಿದ್ದಾರೆ ಎಂಬುದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿ ಎಂದು ಬಿಜೆಪಿ ಹೇಳಿದೆ.
ವೃದ್ಧಿಯಾದ ಸಂಬಂಧದ ಫಲವಾಗಿ ಭಾರತಕ್ಕೆ ಈಗಾಗಲೇ ಆಗಿರುವ ಲಾಭಗಳಿಗೆ ಅಂಕಿ-ಅಂಶಗಳೇ ಕನ್ನಡಿ ಹಿಡಿಯುತ್ತವೆ. 2013-14ರಲ್ಲಿ ಅಮೆರಿಕದಿಂದ ಭಾರತಕ್ಕೆ ಹರಿದು ಬಂದ ವಿದೇಶಿ ನೇರ ಬಂಡವಾಳ (FDI) ಸುಮಾರು ₹0.47 ಶತಕೋಟಿ. ಆದರೆ, ಒಂಭತ್ತು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ಧೀಮಂತ ನಾಯಕತ್ವದ ಫಲವಾಗಿ ಈ ಪ್ರಮಾಣ ದುಪ್ಪಟ್ಟು, 28 ಪಟ್ಟು ಅಧಿಕವಾಗಿ 13.8 ಶತಕೋಟಿಗೆ ತಲುಪಿದೆ ಎಂದು ಬಿಜೆಪಿ ತಿಳಿಸಿದೆ.
ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿರುವುದರಿಂದ ವ್ಯವಹಾರಿಕ-ಸಾಂಸ್ಕೃತಿಕ ಸಂಬಂಧಗಳು ಮಾತ್ರವಲ್ಲ. ಭಾರತದ ರಕ್ಷಣಾ ಕ್ಷೇತ್ರಕ್ಕೆ ಅತಿಹೆಚ್ಚು ಪ್ರಯೋಜನಗಳು ಲಭಿಸಿವೆ. ವಿಶ್ವದಲ್ಲೇ ಅತ್ಯುನ್ನತ ಮಿಲಿಟರಿ ತಂತ್ರಜ್ಞಾನ ಹೊಂದಿರುವ ರಾಷ್ಟ್ರ ಅಮೆರಿಕ. ಪ್ರಧಾನಿ ಮೋದಿ ಅವರಿಗೆ ಅಮೆರಿಕದ ಜತೆಗಿರುವ ಉತ್ತಮ ಸಂಬಂದಧ ಫಲವಾಗಿ ಇಂದು ಆ ಮಿಲಿಟರಿ ತಂತ್ರಜ್ಞಾನದ ಶೇ 100ರಷ್ಟು ಲಾಭಗಳು ಭಾರತಕ್ಕೂ ಸಿಗುತ್ತಿವೆ. ಯುದ್ಧ ವಿಮಾನ ತಯಾರಿಕಾ ಕಂಪನಿ ಲಾಕ್‌ಹೀಡ್ ಮಾರ್ಟಿನ್ ಈಗಾಗಲೇ ಟಾಟಾ ಜತೆ ಉತ್ಪಾದನಾ ಕಾರ್ಯಕ್ಕಿಳಿದಿದೆ. ಬೆಂಗಳೂರಿನ ಹೆಮ್ಮೆಯ ಎಚ್‌ಎಎಲ್ ಜತೆ ಸೇರಿ ಜನರಲ್ ಇಲೆಕ್ಟ್ರಿಕ್ ಇದೀಗ ಜೆಟ್ ಎಂಜಿನ್ ತಯಾರಿಸಲು ಅಣಿಯಾಗುತ್ತಿರುವುದು ಇದಕ್ಕೆ ಸಾಕ್ಷಿ ಎಂದು ಬಿಜೆಪಿ ಹೇಳಿಕೊಂಡಿದೆ.
'ರಕ್ಷಣಾ ವಲಯದ ದೃಷ್ಟಿಯಿಂದ ನೋಡಿದರೆ ಚೀನಾದ ರಾಕ್ಷಸ ಓಟಕ್ಕೆ ಬ್ರೇಕ್ ಹಾಕಲು ಅಮೆರಿಕವೂ ಭಾರತವನ್ನೇ ನೆಚ್ಚಿಕೊಂಡಿದೆ. ಆಸ್ಟ್ರೇಲಿಯಾ, ಜಪಾನ್ ದೇಶಗಳನ್ನೂ ಸೇರಿಸಿ ಅಮೆರಿಕ ಫೆಸಿಫಿಕ್ ಸಾಗರದ ರಕ್ಷಣೆಗೆ ಭಾರತವನ್ನು ನೆಚ್ಚಿಕೊಂಡಿದೆ. ಅಮೆರಿಕದ ಜತೆಗಿನ ಉತ್ತಮ ಬಾಂಧವ್ಯ ಜಪಾನ್, ಆಸ್ಟ್ರೇಲಿಯಾ ಜತೆಗೂ ವಹಿವಾಟು ವೃದ್ಧಿಗೆ ಸಹಕಾರಿಯಾಗಿದೆ. ಇಂಡೋ-ಪೆಸಿಫಿಕ್ ದೇಶಗಳ ಜತೆ ಮುಕ್ತ ವಾಣಿಜ್ಯ ಸಂಬಂಧ ಮುಂದಿನ ಅರ್ಧ ಶತಮಾನ ಭಾರತಕ್ಕೆ ಲಾಭ ತಂದುಕೊಡಲಿದೆ ಎಂದು ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.
'ಇವೆಲ್ಲಕ್ಕೂ ಕಳಶವಿಟ್ಟಂತೆ ಭಾರತೀಯ ಪರಂಪರೆ ಮತ್ತು ಐತಿಹಾಸಿಕ ಹಿರಿಮೆ ಮರಳಿ ಪಡೆಯುವಂಥ ಕಾರ್ಯ ಮೋದಿ ನೇತೃತ್ವದ ಸರ್ಕಾರದಿಂದ ಆಗುತ್ತಿದೆ. ಭಾರತದಿಂದ ಕಳ್ಳಸಾಗಣೆಗೆ ಒಳಗಾದ 157 ಪುರಾತನ ವಿಗ್ರಹಗಳನ್ನು ಭಾರತ ಅಮೆರಿಕದಿಂದ ಮರಳಿ ಪಡೆದಿದೆ. ಈ ಮೂಲಕ ಸಂಸ್ಕೃತಿಗಳ, ಸರ್ಕಾರಗಳು, ಕಂಪನಿಗಳ ನಡುವಿನ ಸಂಬಂಧ ಮೀರಿ ಭಾರತ ಅಂತರಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಕೀರ್ತಿಪತಾಕೆ ಹಾರಿಸುತ್ತಿದೆ' ಎಂದು ಬಿಜೆಪಿ ಹೇಳಿದೆ.