ಇಂಫಾಲ್/ಗುವಾಹಟಿ: 'ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ' ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ಆರ್.ಕೆ. ರಂಜನ್ ಸಿಂಗ್ ಅವರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
' ಇಂಫಾಲ್‌ನಲ್ಲಿರುವ ನನ್ನ ಮನೆಯ ಮೇಲೆ ಗುಂಪೊಂದು ಗುರುವಾರ ರಾತ್ರಿ ಪೆಟ್ರೋಲ್ ಬಾಂಬ್‌ನಿಂದ ದಾಳಿ ನಡೆಸಿ, ಧ್ವಂಸಗೊಳಿಸಿದೆ. ಮನೆಗೆ ಬೆಂಕಿ ಹಚ್ಚಲೂ ಗುಂಪು ಯತ್ನಿಸಿದೆ. ನನ್ನ ಮನೆಯ ಮೇಲೆ ನಡೆಯುತ್ತಿರುವ ಎರಡನೇ ದಾಳಿ ಇದು. ಅಗ್ನಿಶಾಮಕ ದಳವು ನನ್ನ ಮನೆಗೆ ಬರದಂತೆ ಉದ್ರಿಕ್ತ ಗುಂಪು ರಸ್ತೆಗಳನ್ನು ಬಂದ್ ಮಾಡಿತು. ಕೇಂದ್ರದಿಂದ ಇಷ್ಟೊಂದು ಸಹಾಯ ದೊರೆತಿದ್ದರೂ, ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಭದ್ರತೆ ಒದಗಿಸುತ್ತಿಲ್ಲ' ಎಂದು ಸಚಿವ ರಂಜನ್ ದೂರಿದ್ದಾರೆ.
ಗುರುವಾರ ಮಧ್ಯಾಹ್ನದ ವೇಳೆಗೆ ಇಂಫಾಲ್‌ನ ಹೃದಯ ಭಾಗದಲ್ಲಿ ಉದ್ರಿಕ್ತ ಗುಂಪು ಹಾಗೂ ಕ್ಷಿಪ್ರ ಕಾರ್ಯ ಪಡೆಗಳ ಮಧ್ಯೆ ಘರ್ಷಣೆ ನಡೆದಿದೆ. ಇದೇ ದಿನ ರಾತ್ರಿ ಸಚಿವರ ಮನೆ ಮೇಲೆ ದಾಳಿ ನಡೆದಿದೆ. ಬುಧವಾರ ರಾಜ್ಯ ಸರ್ಕಾರದ ಸಚಿವೆ ನೆಮ್ಚಾ ಕಿಪ್ಗೆನ್ ಅವರ ಮನೆ ಮೇಲೂ ದಾಳಿ ನಡೆದಿತ್ತು. ಇವರು ಕುಕಿ ಸಮುದಾಯಕ್ಕೆ ಸೇರಿದವರು. ರಂಜನ್ ಅವರ ಮೈತೇಯಿ ಸಮುದಾಯಕ್ಕೆ ಸೇರಿದವರು. ಪ್ರತೀಕಾರವಾಗಿ ರಂಜನ್ ಅವರ ಮನೆ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
'ಸಾವಿರಾರು ಜನರು ಮನೆಯ ಮುಂದೆ ಜಮಾವಣೆಗೊಂಡಿದ್ದರು. ಉದ್ರಿಕ್ತ ಗುಂಪು ಮನೆಗೆ ಬೆಂಕಿ ಹಚ್ಚುವುದನ್ನು ಭದ್ರತಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ತಡೆದರು. ಮನೆಯಲ್ಲಿರುವ ಯಾರಿಗೂ ತೊಂದರೆ ಆಗಿಲ್ಲ' ಎಂದು ಅಧಿಕಾರಿಗಳು ತಿಳಿಸಿದರು. ರಂಜನ್ ಸಿಂಗ್ ಅವರು ಕೇರಳದಲ್ಲಿ ಅಧಿಕೃತ ಪ್ರವಾಸದಲ್ಲಿದ್ದರು. ಸುದ್ದಿ ತಿಳಿದ ತಕ್ಷಣವೇ ಅವರು ಇಂಫಾಲ್‌ಗೆ ಮರಳಿದ್ದಾರೆ.
ಮುಂದುವರಿದ ಹಿಂಸಾಚಾರ: ಶುಕ್ರವಾರ ಬೆಳಗಿನ ಜಾವದವರೆಗೂ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಗುಂಡಿನ ಚಕಮಕಿಯ ಸದ್ದು ಕೇಳಿಸುತ್ತಿತ್ತು. ಉದ್ರಿಕ್ತ ಗುಂಪುಗಳನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಹಾಗೂ ಅಣಕು ಬಾಂಬ್‌ಗಳನ್ನು ಹಲವು ಸುತ್ತುಗಳಲ್ಲಿ ಸಿಡಿಸಿದ್ದಾರೆ. ಬುಧವಾರ ನಡೆದ ಸಂಘರ್ಷದಲ್ಲಿ ಒಂಬತ್ತು ಮಂದಿ ನಾಗರಿಕರು ಮೃತಪಟ್ಟಿದ್ದರು. ಈ ಕಾರಣದಿಂದಾಗಿ ಮಣಿಪುರದಲ್ಲಿ ಘರ್ಷಣೆಗಳು ತೀವ್ರಗೊಂಡಿವೆ.
ಶುಕ್ರವಾರ ಸಂಜೆ ವೇಳೆಗೆ ಉದ್ರಿಕ್ತ ಗುಂಪೊಂದು ಗೋದಾಮಿಗೆ ಬೆಂಕಿ ಹಚ್ಚಿದೆ. ಈ ಘಟನೆ ಬಳಿಕ ಕ್ಷಿಪ್ರ ಕಾರ್ಯ ಪಡೆ ಮತ್ತು ಉದ್ರಿಕ್ತ ಗುಂಪಿನ ಮಧ್ಯೆ ಸಂಘರ್ಷ ಹೆಚ್ಚಾಗಿದೆ.
* ಮಣಿಪುರದಲ್ಲಿನ ಏನು ನಡೆಯುತ್ತಿದೆ ಎಂದುದನ್ನು ತಿಳಿಯಲು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಸಭೆ ಕರೆಯಿರಿ ಎಂದು ತೃಣಮೂಲ ಕಾಂಗ್ರೆಸ್ ರಾಜ್ಯಸಭೆ ಸದಸ್ಯ ಡೆರಿಕ್ ಒಬ್ರಿಯಾನ್ ಆಗ್ರಹಿಸಿದ್ದಾರೆ.
* ಮೇಲ್ವಿಚಾರಣೆಗೆ ನ್ಯಾಯಮಂಡಳಿಯೊಂದನ್ನು ಸ್ಥಾಪಿಸಲು ಹಲವು ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿವೆ
* ಸಂಘರ್ಷ ನಡೆದ ಪ್ರದೇಶಗಳಲ್ಲಿ ಭದ್ರತಾ ಪಡೆಗಳನ್ನು ಹೆಚ್ಚು ಹೆಚ್ಚು ನಿಯೋಜಿಸುವ ಮೂಲಕ ಕೇಂದ್ರ ಗೃಹ ಸಚಿವಾಲಯವು ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಕಾರ್ಯಪ್ರವೃತ್ತವಾಗಿದೆ
ಪಿ.ಚಿದಂಬರಂ, ಕಾಂಗ್ರೆಸ್ ನಾಯಕಮಣಿಪುರದಲ್ಲಿ 'ಡಬಲ್ ಎಂಜಿನ್' ಸೋತಿದೆ. ಇಂಧನ ಖಾಲಿಯಾದ ರಾಜ್ಯದ ಎಂಜಿನ್ ಅನ್ನು ಅಲ್ಲೆ ಬಿಟ್ಟು ಕೇಂದ್ರದ ಎಂಜಿನ್ ಓಡಿ ಹೋಗಿ ಅಡಗಿ ಕುಳಿತಿದೆ.ಜೈರಾಂ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಕೇಂದ್ರದ ಸಚಿವರೊಬ್ಬರು ರಾಜ್ಯದ ಸ್ಥಿತಿ ಬಗ್ಗೆ ದುಃಖಿಸುತ್ತಿದ್ದರೆ ಪ್ರಧಾನಮಂತ್ರಿಗಳು ಮೌನವಾಗಿದ್ದಾರೆ ಮತ್ತು ತಮ್ಮ ಅಮೆರಿಕ ಭೇಟಿಗೆ ತಯಾರಿ ನಡೆಸುತ್ತಿದ್ದಾರೆ.