ಬಹುತೇಕ ಮಕ್ಕಳಲ್ಲಿ ಕ್ಯಾವಿಟಿ ಅಥವಾ ದಂತಕ್ಷಯ ಸಮಸ್ಯೆ ಕಂಡು ಬರುವುದು ತುಂಬಾನೇ ಸಹಜ. 5 ವರ್ಷ ಕೆಳಗಿನ ತುಂಬಾ ಮಕ್ಕಳು ನಕ್ಕರೆ ಅವರ ಮುಂದಿನ ಹಲ್ಲುಗಳು ಹಳದಿ ಅಥವಾ ಕಪ್ಪಾಗಿರುತ್ತದೆ, ಇನ್ನು ಕೆಲವು ಮಕ್ಕಳಿಗೆ ಹಲ್ಲುಗಳು ಪುಡಿ-ಪುಡಿಯಾಗಿ ಮುಂದುಗಡೆ ಹಲ್ಲಿಲ್ಲದೆ ಮುದ್ದು-ಮುದ್ದಾಗಿ ನಗುತ್ತವೆ. ಹುಳುಕು ಹಲ್ಲುಗಳನ್ನು ನೋಡಿದಾಗ ಮಿಠಾಯಿ ತಿಂದು ಹಲ್ಲುಗಳೇ ಇಲ್ವಲ್ಲಾ ಎಂದು ತಮಾಷೆ ಮಾಡುತ್ತೇವೆ.
ಕೆಲವರಿಗೆ ಈ ಹುಳುಕು ಹಲ್ಲು ಯಾವುದೇ ಸಮಸ್ಯೆ ಉಂಟು ಮಾಡಲ್ಲ, ಆ ಹಲ್ಲುಗಳು ಬಿದ್ದು ಹೋದ ಮೇಲೆ ಹೊಸ ಹಲ್ಲು ಬರುತ್ತದೆ. ಆದರೆ ಇನ್ನು ಕೆಲವು ಮಕ್ಕಳಿಗೆ ತುಂಬಾನೇ ಸಮಸ್ಯೆ ಉಂಟು ಮಾಡುತ್ತದೆ. ಆಗಾಗ ಹಲ್ಲು ನೋವು ಉಂಟಾಗುವುದು, ಕೆಲವೊಮ್ಮೆ ವಸಡುಗಳಲ್ಲಿ ಕೀವು ತುಂಬಿದ ಹುಣ್ಣು ಕೂಡ ಉಂಟಾಗುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ Abscessed Tooth ಎಂದು ಕರೆಯಲಾಗುವುದು.ವಸಡುಗಳಲ್ಲಿ ಕೀವು ತುಂಬಿದ ಹುಣ್ಣು ಕಂಡು ಬಂದರೆ ಕೂಡಲೇ ದಂತ ವೈದ್ಯರಿಗೆ ತೋರಿಸುವುದು ಒಳ್ಳೆಯದು. ಈ ಕುರಿತು ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ: ವಸಡುಗಳಲ್ಲಿ ಕೀವು ತುಂಬಿದ ಹುಣ್ಣು ಉಂಟಾಗಲು ಕಾರಣವೇನು? ವಸಡುಗಳಲ್ಲಿ ಕೀವು ತುಂಬಿದ ಹುಣ್ಣು ಉಂಟಾಗಲು ದಂತಕ್ಷಯವಾದ ಹಲ್ಲುಗಳಲ್ಲಿರುವ ಬ್ಯಾಕ್ಟಿರಿಯಾ ಕಾರಣ. ಇದರಿಂದ ಉರಿಯೂತ ಉಂಟಾಗುವುದು, ಇದರಿಂದ ಹಲ್ಲುಗಳು ಸಡಿಲವಾಗುವುದು. ದಂತಕ್ಷಯವಾಗಿ ಹಲ್ಲಿನ ಮಧ್ಯಭಾಗಕ್ಕೆ ತಲುಪಿದಾಗ ಇದರಿಂದ ಹಲ್ಲಿನ ನರಕ್ಕೆ ಹಾನಿಯುಂಟಾಗಿ ಸೋಂಕು ಉಂಟಾಗಿ ಈ ರೀತಿಯಾಗುವುದು.
ಟೂತ್ ಏಬ್ಸೆಸ್ ಲಕ್ಷಣಗಳು
- ಯಾವ ಹಲ್ಲಿನಲ್ಲಿ ಹುಳುಕು ಆಗಿರುತ್ತದೋ ಆ ಭಾಗದಲ್ಲಿ ನೋವು ಉಂಟಾಗುವುದು
- ಬಿಸಿ ಅಥವಾ ತಣ್ಣನೆಯ ಆಹಾರ ಸೇವಿಸಿದಾಗ ನೋವು ಉಂಟಾಗುವುದು
- ವಸಡುಗಳಲ್ಲಿ ಕೆಂಪು ಬಣ್ಣದ ಹುಣ್ಣು ಕಂಡು ಬರುವುದು
- ವಸಡುಗಳಲ್ಲಿ ಊತ
- ಅದೇ ಭಾಗದ ಕಿವಿಯಲ್ಲಿ ನೋವು ಕಂಡು ಬರುವುದು
- ಆ ಹುಣ್ಣಿನಿಂದ ಕೀವು ಬರುವುದು
- ದವಡೆಗಳಲ್ಲಿ ಊತ ಉಂಟಾಗುವುದು
- ಕುತ್ತಿಗೆ ಭಾಗದಲ್ಲಿ ಊತ ಕಂಡು ಬರುವುದು
- ಬಾಯಲ್ಲಿ ಕಹಿ ನೀರು ಬಂದಂತಾಗುವುದು
- ಬಾಯಿ ದುರ್ವಾಸನೆ ಬೀರುವುದು
Dental abscesses ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತದೆ
- ಹಲ್ಲುಗಳು ಬಿದ್ದು ಹೀಗುವುದು
- ರಕ್ತದಲ್ಲಿ ಸೋಂಕು
- ಇತರ ಭಾಗಕ್ಕೂ ಸೋಂಕು ಉಂಟಾಗುವುದು
- ವಸಡಿನ ಮೂಳೆಗೆ ಸೋಂಕು ಹರಡಬಹುದು.
- ದೇಹದ ಇತರ ಭಾಗಗಳಿಗೆ ಸೋಂಕು ಹರಡಬಹುದು, ಇದರಿಂದ ಮೆದುಳಿಗೂ ಹಾನಿ ಉಂಟು ಮಾಡಬಹುದು, ಹೃದಯದಲ್ಲಿ ಉರಿಯೂತ, ನ್ಯೂಮೋನಿಯಾ ಈ ಬಗೆಯ ಸಮಸ್ಯೆ ಉಂಟಾಗಬಹುದು.
ಯಾವಾಗ ತಕ್ಷಣ ವೈದ್ಯರಿಗೆ ತೋರಿಸಬೇಕು?
ಜ್ವರ
ವಾಂತಿ
ಊತ, ಕೆಂಪಾಗುವುದು
ಉಸಿರಾಟದಲ್ಲಿ ತೊಂದರೆ
ಕಣ್ಣುಗಳು ಕೆಂಪಾಗುವುದು
ಬಾಯಲ್ಲಿ ಊತ
ಮಕ್ಕಳಲ್ಲಿ ದಂತಕ್ಷಯ ತಡೆಗಟ್ಟಲು ಅವರ ಹಲ್ಲಿನ ಶುಚಿತ್ವ ಕಡೆಗೆ ತುಂಬಾನೇ ಗಮನಹರಿಸಬೇಕು.