ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರ ಮುಂದುವರೆದಿದ್ದು, ವಿವಿಧ ಜನಾಂಗಗಳ ನಡುವೆ ಶಾಂತಿ ಸ್ಥಾಪನೆ ಪ್ರಕ್ರಿಯೆ ಸುಲಭಗೊಳಿಸಲು ಮತ್ತು ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮಣಿಪುರ ರಾಜ್ಯಪಾಲರ ನೇತೃತ್ವದಲ್ಲಿ ಸಮಿತಿ ರಚಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ತಿಳಿಸಿದೆ.
ಶಾಂತಿ ಸಮಿತಿಯ ಸದಸ್ಯರಲ್ಲಿ ಮುಖ್ಯಮಂತ್ರಿ, ಕೆಲವು ಸಚಿವರು, ಸಂಸದರು, ಶಾಸಕರು ಮತ್ತು ವಿವಿಧ ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಮಾಜದ ಮುಖಂಡರು ಇದ್ದಾರೆ ಎಂದು ಕೇಂದ್ರ ಹೇಳಿದೆ.
ಮಣಿಪುರದ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರ ಮಣಿಪುರದಲ್ಲಿ 'ಶಾಂತಿ ಸಮಿತಿ'ಯನ್ನು ರಚಿಸಿದೆ. ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಕೆಲವು ಸಚಿವರು, ಸಂಸದರು, ಶಾಸಕರು ಮತ್ತು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಮಿತಿಯ ಸದಸ್ಯರಾಗಿದ್ದಾರೆ ಎಂದು ಗೃಹ ಸಚಿವಾಲಯ ಪ್ರಕಟಣೆ ತಿಳಿಸಿದೆ.
ನಿವೃತ್ತ ಐಎಎಸ್ ಅಧಿಕಾರಿಗಳು, ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಜನಾಂಗದ ಪ್ರತಿನಿಧಿಗಳನ್ನು ಸಹ ಈ ಸಮಿತಿ ಒಳಗೊಂಡಿದೆ ಎಂದು ಗೃಹ ಸಚಿವಾಲಯ ಹೇಳಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮೇ 29 ರಿಂದ ಜೂನ್ 1 ರವರೆಗೆ ಮಣಿಪುರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಶಾಂತಿ ಸಮಿತಿ ರಚಿಸುವುದಾಗಿ ಘೋಷಿಸಿದ್ದರು.