ಕಾಸರಗೋಡು: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕಾಲ ಪಕ್ವವಾಗಿದೆ ಎಂದು ಬಿಜೆಪಿಯ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಮಾತನಾಡಿದರು.
ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ವಿಷಯದಲ್ಲಿ ಬಿಜೆಪಿ ಸ್ಪಷ್ಟ ನಿಲುವು ಹೊಂದಿದ್ದು, ಲೋಕಸಭಾ ಅಧಿವೇಶನ, ಸಾರ್ವಜನಿಕ ವಲಯದಲ್ಲಿ ವರ್ಷಗಳ ಹಿಂದೆಯೇ ಜಾರಿಯ ಅಗತ್ಯದ ಬಗ್ಗೆ ಪಕ್ಷ ಪ್ರತಿಪಾದಿಸಿದೆ. ಏಕರೂಪ ನಾಗರಿಕ ಸಂಹಿತೆ ಜಾರಿ ವಿರುದ್ಧ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಲ್ಪಸಂಖ್ಯಾತರನ್ನು ಎತ್ತಿಕಟ್ಟಲು ಶ್ರಮಿಸುತ್ತಿದೆ. ಕಳೆದ ಒಂಬತ್ತು ವರ್ಷಗಳ ನರೇಂದ್ರ ಮೋದಿ ಆಡಳಿತವನ್ನು ಜನತೆ ಅಂಗೀಕರಿಸಿದ್ದಾರೆ. ಇದರಿಂದ ಕಂಗಾಲಾಗಿರುವ ಪ್ರತಿಪಕ್ಷಗಳು ಸಮಾನ ನಾಗರಿಕ ಸಂಹಿತೆ ವಿರುದ್ಧ ಸುಳ್ಳು ಪ್ರಚಾರ ನಡೆಸುತ್ತಿದೆ. ಇದು ಅಲ್ಪಸಂಖ್ಯಾತರ ಮತೀಯ ವಿಶ್ವಾಸಕ್ಕೆ ಧಕ್ಕೆ ತಂದೊಡ್ಡಲಿರುವುದಾಗಿ ಸಉಳ್ಳು ಪ್ರಚಾರದ ಮೂಲಕ ಅಲ್ಪಸಂಖ್ಯಾತ ವಲಯದಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ. ದೆಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಅಲ್ಪಸಂಖ್ಯಾತರ ವಿಶ್ವಾಸಕ್ಕೆ ಯಾವುದೇ ಧಕ್ಕೆಯುಂಟಾಗದು. ಬದಲಾಗಿ ಇದು ದೇಶದ ನಾಗರಿಕ ಕಾನೂನಿನಲ್ಲಿರುವ ತೊಡಕುಗಳಿಗೆ ಪರಿಹಾರವುಂಟಗಲಿದೆ. ದೇಶ ಸ್ವಾತಂತ್ರ್ಯದ ಅಮೃತವರ್ಷಾಚರಣೆಯಲ್ಲಿರುವುದರಿಂದ ಸಮಾನ ನಾಗರಿಕ ಸಂಹಿತೆ ಜಾರಿ ಬಗ್ಗೆ ಎಲ್ಲರಲ್ಲೂ ಒಮ್ಮತ ಮೂಡಿಬರಲಿರುವುದಾಗಿ ಆಶಯ ವ್ಯಕ್ತಪಡಿಸಿದರು.
ಬೀದಿನಾಯಿಗಳಿಂದ ರಕ್ಷಣೆ ಸರ್ಕಾರದ ಜವಾಬ್ದಾರಿ:
ಕೇರಳಾದ್ಯಂತ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು, ಇವುಗಳಿಂದ ಜನರಿಗೆ ರಕ್ಷಣೆ ಒದಗಿಸಲು ಸರ್ಕಾರ ಮುಂದಾಗಬೇಕು. ಮೊದಲು ಮನುಷ್ಯರ ಜೀವ ರಕ್ಷಣೆ, ನಂತರ ಪ್ರಾಣಿಗಳಿಗೆ ಆದ್ಯತೆ ನೀಡಲಿ ಎಂದು ರಾಜ್ಯದಲ್ಲಿ ಬೀದಿನಾಯಿಗಳ ಉಪಟಳ ಹೆಚ್ಚಾಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ನಕಲಿ ಸರ್ಟಿಫಿಕೇಟ್ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಮಣಿಪುರದಲ್ಲಿ ನಡೆಯುತ್ತಿರುವ ಆಂತರಿಕ ಕಲಹವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಶಾಂತಿ ನೆಲೆಸಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ರಜ್ಯ ಸಮಿತಿ ಕಾರ್ಯದರ್ಶಿಗಳಾದ ಕೆ. ರಂಜಿತ್, ವಕೀಲ ಪ್ರಕಾಶ್‍ಬಾಬು, ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಪ್ರದನ ಕಾರ್ಯದರ್ಶಿ ವಿಜಯಕುಮಾರ್ ರಐ ಉಪಸ್ಥಿತರಿದ್ದರು.