ನವದೆಹಲಿ: ಶಿಕ್ಷಣ ಕ್ಷೇತ್ರದಲ್ಲಿ ಕೆಲವು ವರ್ಷಗಳಿಂದ ತೆಗೆದುಕೊಂಡ ನೀತಿ- ನಿರ್ಧಾರಗಳು ಭಾರತೀಯ ವಿಶ್ವವಿದ್ಯಾಲಯಗಳ ಜಾಗತಿಕ ಮನ್ನಣೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದರು.
ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮೋದಿ, ಭಾರತೀಯ ವಿಶ್ವವಿದ್ಯಾಲಯಗಳ ಸಂಖ್ಯೆ 2014 ರಲ್ಲಿ (ಮೋದಿ ಅವರು ಪ್ರಧಾನಿಯಾದ ವರ್ಷ) 12 ರಿಂದ 45ಕ್ಕೆ ಏರಿದೆ.
ದೇಶದಾದ್ಯಂತ ಐಐಟಿಗಳು, ಐಐಎಂಗಳು, ಏಮ್ಸ್ ಮತ್ತು ಎನ್‌ಐಟಿಗಳ ಸಂಖ್ಯೆ ಹೆಚ್ಚಳ ಉಲ್ಲೇಖಿಸಿದ ಅವರು ಅವುಗಳನ್ನು ನವ ಭಾರತದ ನಿರ್ಮಾಣ ಘಟಕಗಳು ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ ಅವರು ಮೆಟ್ರೊದಲ್ಲಿ ಪ್ರಯಾಣ ಮಾಡಿದರು. ತಮ್ಮ ಪ್ರಯಾಣದ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು.
ತಮ್ಮ ಇತ್ತೀಚಿನ ಅಮೆರಿಕ ಭೇಟಿ ಬಗ್ಗೆ ಮಾತನಾಡಿದ ಪ್ರಧಾನಿ, ಭಾರತದ ಸಾಮರ್ಥ್ಯದ ಹೆಚ್ಚಳ ಮತ್ತು ದೇಶದ ಯುವಕರ ಮೇಲಿನ ವಿಶ್ವದ ನಂಬಿಕೆಯಿಂದಾಗಿ ಜಾಗತಿಕ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಿದೆ ಎಂದರು.
ತಮ್ಮ ಭೇಟಿ ವೇಳೆ ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಉಲ್ಲೇಖಿಸಿದ ಅವರು, ಇದು ಭಾರತದ ಯುವಜನರಿಗೆ ಭೂಮಿಯಿಂದ ಬಾಹ್ಯಾಕಾಶ, ಅರೆವಾಹಕಗಳು ಮತ್ತು ಕೃತಕ ಬುದ್ಧಿಮತ್ತೆವರೆಗಿನ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ತರುತ್ತದೆ ಎಂದು ಹೇಳಿದರು.
ಮೈಕ್ರಾನ್ ಮತ್ತು ಗೂಗಲ್ ನಂತಹ ಕಂಪನಿಗಳು ದೇಶದಲ್ಲಿ ಭಾರಿ ಹೂಡಿಕೆ ಮಾಡಲಿವೆ. ಇದು ಭವಿಷ್ಯದ ಭಾರತದ ಸಂಕೇತವಾಗಿದೆ ಎಂದರು.
ನಳಂದ ಮತ್ತು ತಕ್ಷಶಿಲೆಯ ಪ್ರಸಿದ್ಧ ಪ್ರಾಚೀನ ಭಾರತೀಯ ವಿಶ್ವವಿದ್ಯಾಲಯಗಳನ್ನು ಉಲ್ಲೇಖಿಸಿದ ಮೋದಿ, ಆ ಯುಗದಲ್ಲಿ ಭಾರತದ ವಿಜ್ಞಾನವು ಜಗತ್ತಿಗೆ ಮಾರ್ಗದರ್ಶನ ನೀಡಿದೆ ಎಂದು ಹೇಳಿದರು.
2014ಕ್ಕೆ ಹೋಲಿಸಿದರೆ ಈಗ ದೇಶದ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಲಕ್ಷ ದಾಟಿದೆ ಎಂದೂ ತಿಳಿಸಿದರು. ಆಹಾರದ ರುಚಿ ಬದಲಿಸಬೇಡಿ: ದೆಹಲಿ ವಿವಿ ಕ್ಯಾಂಪಸ್ ನಲ್ಲಿನ ಜನಪ್ರಿಯ ಭಕ್ಷ್ಯಗಳನ್ನು ಉಲ್ಲೇಖಿಸಿದ ಪ್ರಧಾನಿ, ವಿಶ್ವವಿದ್ಯಾಲಯದ ಉತ್ತರ ಮತ್ತು ದಕ್ಷಿಣ ಕ್ಯಾಂಪಸ್ ಸುತ್ತಮುತ್ತಲಿನ ಆಹಾರ ಮಳಿಗೆಗಳಲ್ಲಿ ಭಕ್ಷ್ಯಗಳ ರುಚಿ ಬದಲಾಗದೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಎಲ್ಲವನ್ನೂ ಸಂಪೂರ್ಣವಾಗಿ ಬದಲಾಯಿಸಬೇಡಿ. ನಾರ್ತ್ ಕ್ಯಾಂಪಸ್‌ನ ಪಟೇಲ್ ಚೆಸ್ಟ್‌ನಲ್ಲಿ ನೀಡುವ ಚಹಾ ಮತ್ತು ನೂಡಲ್ಸ್, ಸೌತ್ ಕ್ಯಾಂಪಸ್‌ನ ಚಾಣಕ್ಯದ ಮೊಮೊಸ್. ಇವುಗಳ ರುಚಿ ಬದಲಾಗದಂತೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.