ಕೊಚ್ಚಿ: ಕಳೆದ ವರ್ಷ ಹೆಬ್ಬಾವು ಬಾಯಿಗೆ ತುತ್ತಾದ ತನ್ನ ಕೋಳಿಗಳ ಸಾವಿಗೆ ಪರಿಹಾರ ನೀಡಬೇಕೆಂದು ವ್ಯಕ್ತಿಯೊಬ್ಬ ಸರ್ಕಾರವನ್ನು ಒತ್ತಾಯಿಸಿರುವ ವಿಚಿತ್ರ ಘಟನೆ ಕೇರಳದಲ್ಲಿ ವರದಿಯಾಗಿದೆ.
ಸಚಿವ ಅಹಮ್ಮದ್ ದೇವರಕೋವಿಲ್, ಜಿಲ್ಲಾಧಿಕಾರಿ ಮತ್ತು ಸಬ್ ಕಲೆಕ್ಟರ್‌ಗಳು ಭಾಗವಹಿಸಿದ್ದ ವೆಳ್ಳರಿಕುಂಡುನಲ್ಲಿ ನಡೆದ ತಾಲೂಕು ಮಟ್ಟದ ಅದಾಲತ್‌ನಲ್ಲಿ ಕೋಳಿಗಳ ಪರಿಹಾರ ವಿಚಾರ ಪ್ರಸ್ತಾಪವಾಗಿದೆ.
ಕಾಸರಗೋಡು ನಿವಾಸಿ ಕೆ.ವಿ. ಜಾರ್ಜ್ ಎಂಬುವರು ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ. ಅದಾಲತ್‌ನಲ್ಲಿ ಭಾಗವಹಿಸಿದ್ದ ಜಾರ್ಜ್, ನನ್ನ ಎಲ್ಲ ಕೋಳಿಗಳು ಹಬ್ಬಾವಿಗೆ ಆಹಾರವಾಗಿವೆ. ಇದರಿಂದ ನನಗೆ ಭಾರೀ ನಷ್ಟವಾಗಿದ್ದು, ಪರಿಹಾರ ನೀಡುವಂತೆ ಕೇಳಿದ್ದಾರೆ.
2022ರ ಜೂನ್ನಲ್ಲಿ ಒಂದು ದಿನ ಬೆಳಗ್ಗೆ ಕೋಳಿಯ ಬುಟ್ಟಿಯನ್ನು ತೆರೆದಾಗ, ಅದರಲ್ಲಿದ್ದ ಎಲ್ಲ ಕೋಳಿಗಳು ನಾಪತ್ತೆಯಾಗಿದ್ದವು. ಬುಟ್ಟಿಯ ಒಳಗೆ ಹೆಬ್ಬಾವು ಇತ್ತು. ಬಳಿಕ ಅರಣ್ಯಾಧಿಕಾರಿಗಳು ನಮ್ಮ ಮನೆಗೆ ಬಂದು ಹಾವನ್ನು ಹಿಡಿದುಕೊಂಡು ಹೋಗಿ ಮತ್ತೆ ಅರಣ್ಯಕ್ಕೆ ಬಿಟ್ಟರು. ಹಾವುಗಳ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದೆವು. ಆದರೆ, ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಮಗೆ ತುಂಬಾ ನಷ್ಟವಾಗಿದೆ. ಹೀಗಾಗಿ ನಮಗೆ ಪರಿಹಾರ ನೀಡಿ ಎಂದು ಒತ್ತಾಯ ಮಾಡಿದ್ದಾರೆ.
ಹಾವುಗಳು ಸರ್ಕಾರಕ್ಕೆ ಸೇರಿದ್ದು ಎಂದಾದರೆ, ಕೋಳಿಗಳು ನನಗೆ ಸೇರಿದ್ದಾಗಿವೆ. ಹೀಗಾಗಿ ನೀವು ನನಗೆ ಪರಿಹಾರ ನೀಡಲೇಬೇಕು ಎಂದು ಜಾರ್ಜ್ ಪಟ್ಟು ಹಿಡಿದಿದ್ದಾರೆ. ಇದೇ ವೇಳೆ ಜಾರ್ಜ್ ಬೇಡಿಕೆಗೆ ಸಚಿವರು ಹಾಗೂ ಅಧಿಕಾರಿಗಳು ಮನ್ನಣೆ ನೀಡಿದ್ದು, ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.