ವಿಲ್ಲುಪುರಂ: ಯುವ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ತಮಿಳುನಾಡು ಮಾಜಿ ವಿಶೇಷ ಡಿಜಿಪಿ ರಾಜೇಶ್ ದಾಸ್ ಅವರನ್ನು ಕೋರ್ಟ್ ದೋಷಿ ಎಂದು ಶುಕ್ರವಾರ ಘೋಷಿಸಿದ್ದು, ಮೂರು ವರ್ಷ ಜೈಲು ಶಿಕ್ಷೆ ಮತ್ತು 20,500 ರೂ. ದಂಡ ವಿಧಿಸಿದೆ.
2021 ರಲ್ಲಿ ದಾಖಲಾದ ಪ್ರಕರಣದ ವಿಚಾರಣೆ ನಡೆಸಿದ ವಿಲ್ಲುಪುರಂ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂ ಪುಷ್ಪರಾಣಿ ಅವರು ಇಂದು ತೀರ್ಪು ನೀಡಿದ್ದಾರೆ.
ಮಹಿಳಾ ಪೊಲೀಸ್ ಅಧಿಕಾರಿ ದೂರು ದಾಖಲಿಸುವುದನ್ನು ತಡೆಯಲು ಯತ್ನಿಸಿದ ಚೆಂಗಲ್ಪಟ್ಟು ಜಿಲ್ಲೆಯ ಮಾಜಿ ಎಸ್ಪಿ ಎಸ್ ಕಣ್ಣನ್ ಅವರನ್ನು ಕೋರ್ಟ್ ದೋಷಿ ಎಂದು ಘೋಷಿಸಿದ್ದು, ಅವರಿಗೆ 500 ರೂ. ದಂಡ ವಿಧಿಸಿದೆ. ಆದರೆ ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಆರೋಪಗಳಿಂದ ಅವರನ್ನು ಖುಲಾಸೆಗೊಳಿಸಲಾಗಿದೆ.
ಮೂಲಗಳ ಪ್ರಕಾರ, ದಾಸ್ ಅವರಿಗೆ ಐಪಿಸಿ ಸೆಕ್ಷನ್ 354 A (ii) ಅಡಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ಹಾಗೂ ತಮಿಳುನಾಡು ಮಹಿಳೆಯರ ಮೇಲಿನ ಕಿರುಕುಳ ತಡೆ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲೂ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 10,000 ರೂ.ದಂಡ ಮತ್ತು ಐಪಿಸಿ ಸೆಕ್ಷನ್ 341 ರ ಅಡಿಯಲ್ಲಿ 500 ರೂ. ದಂಡವನ್ನೂ ವಿಧಿಸಲಾಗಿದೆ. ಈ ಎರಡೂ ಜೈಲು ಶಿಕ್ಷೆಗಳು ಏಕಕಾಲದಲ್ಲಿ ಜಾರಿಗೆ ಬರುತ್ತವೆ.
ಫೆಬ್ರವರಿ 21, 2021 ರಂದು ನಾಮಕ್ಕಲ್‌ನಲ್ಲಿ ಅಂದಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಸಭೆಗೆ ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗ ದಾಸ್ ಅವರು ಯುವ ಮಹಿಳಾ ಐಪಿಎಸ್ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.