ಲಖನೌ: 'ಆದಿಪುರುಷ್' ಸಿನಿಮಾದಲ್ಲಿನ ವಿವಾದಿತ ಸಂಭಾಷಣೆಗಳು ಮತ್ತು ದೃಶ್ಯಗಳ ಕುರಿತು ಕೇಂದ್ರೀಯ ಚಲನಚಿತ್ರ ಪ್ರಮಾಣ ಮಂಡಳಿಯನ್ನು (ಸಿಬಿಎಫ್‌ಸಿ) ಮಂಗಳವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಅಲಹಾಬಾದ್ ಹೈಕೋರ್ಟ್‌ನ ಲಖನೌ ಪೀಠವು, 'ಸೆನ್ಸಾರ್ ಮಂಡಳಿಯು ತನ್ನ ಜವಾಬ್ದಾರಿಯನ್ನು ಅರ್ಥಮಾಡಿಕೊಂಡಿದೆಯೇ' ಎಂದು ಆಶ್ಚರ್ಯ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ರಾಜೇಶ್ ಸಿಂಗ್ ಚೌಹಾನ್ ಮತ್ತು ಶ್ರೀಪ್ರಕಾಶ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು, ಸಹಿಷ್ಣು ಎಂದು ಹೇಳಲಾದ ಧರ್ಮವನ್ನು ಈ ರೀತಿ ಪರೀಕ್ಷಿಸಲಾಗುತ್ತದೆಯೇ ಎಂಬುದನ್ನು ಗಮನಿಸಿ, ಪ್ರಶ್ನಿಸಿದೆ.
'ಆದಿಪುರುಷ್' ಸಿನಿಮಾದಲ್ಲಿ ಭಗವಾನ್ ರಾಮ, ಹನುಮಂತ ಮತ್ತು ಇತರ ಧಾರ್ಮಿಕ ಪಾತ್ರಗಳನ್ನು ಆಕ್ಷೇಪಾರ್ಹವಾದ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ಹಿಂದೂಗಳ ಮಹಾಕಾವ್ಯವಾಗಿರುವ 'ರಾಮಾಯಣ'ವನ್ನು ಗೌರವಿಸುವ ಜನರ ಭಾವನೆಗಳಿಗೆ ನೋವುಂಟು ಮಾಡಿದೆ. ಹಾಗಾಗಿ ಈ ಸಿನಿಮಾವನ್ನು ನಿಷೇಧಿಸಬೇಕು' ಎಂದು ಕೋರಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠವು, ಸೆನ್ಸಾರ್ ಮಂಡಳಿಯ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಸಿನಿಮಾದ ಸಹ-ಲೇಖಕ ಮನೋಜ್ ಮುಂತಾಶ್ರ್ ಶುಕ್ಲಾ ಅವರನ್ನು ಈ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಪರಿಗಣಿಸಬೇಕೆಂಬ ಮನವಿಯನ್ನು ಅಂಗೀಕರಿಸಿದ ನ್ಯಾಯಾಲಯವು, ಈ ಸಂಬಂಧ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡವುಂತೆ ಶುಕ್ಲಾ ಅವರಿಗೆ ಸೂಚನೆ ನೀಡಿತು.
'ಶುಕ್ಲಾ ಅವರ ಬರೆದಿರುವ ಸಂಭಾಷಣೆಗಳು ಹಿಂದೂ ಧರ್ಮದ ಧಾರ್ಮಿಕ ಪ್ರತಿಮೆಗಳನ್ನು ಅತ್ಯಂತ ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿವೆ. ಸೃಜನಶೀಲತೆ ಮತ್ತು ಸ್ವಾತಂತ್ರದ್ಯ ಹೆಸರಿನಲ್ಲಿ ಇದನ್ನು ಸಮರ್ಥಿಸಲು ಅವರು ಪ್ರಯತ್ನಿಸಿದ್ದಾರೆ' ಎಂದೂ ಅರ್ಜಿದಾರರು ವಾದಿಸಿದ್ದಾರೆ.
ಸೆನ್ಸಾರ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠವು, 'ಮಂಡಳಿಯು ತನ್ನ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ಅಸಮರ್ಥವಾಗಿದೆ ಎಂದು ತೋರುತ್ತದೆ. ಸಿನಿಮಾ ಸಮಾಜದ ಕನ್ನಡಿ. ಮುಂದಿನ ಪೀಳಿಗೆಗೆ ನೀವು ಏನನ್ನು ಕಲಿಸಲು ಬಯಸುತ್ತೀರಿ' ಎಂದೂ ಟೀಕಿಸಿದೆ.
ಸಿನಿಮಾ ಕುರಿತ ತೀವ್ರ ಪ್ರತಿಭಟನೆಗಳ ಬಳಿಕ ಸಿನಿಮಾದಿಂದ ಕೆಲವು ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಿರುವ ಕುರಿತು ನ್ಯಾಯಾಲಯವು ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದೆ.