ನವದೆಹಲಿ (PTI): ಯಾವುದೇ ಗುರುತಿನ ಚೀಟಿ ಹಾಗೂ ಅರ್ಜಿ ಸಲ್ಲಿಸದೆಯೇ ₹ 2 ಸಾವಿರ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅಧಿಸೂಚನೆ ಪ್ರಕಟಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತುರ್ತಾಗಿ ವಿಚಾರಣಾ ಪಟ್ಟಿಗೆ ಸೇರಿಸುವ ಕುರಿತು ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ತನ್ನ ರಿಜಿಸ್ಟ್ರಿಗೆ ಬುಧವಾರ ಸೂಚಿಸಿದೆ.
ಅರ್ಜಿದಾರರಲ್ಲೊಬ್ಬರಾದ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಕೋರಿದರು. ಆಗ, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ್ ಬಿಂದಲ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಇದಕ್ಕೂ ಮುನ್ನ ವಾದ ಮಂಡಿಸಿದ್ದ ಉಪಾಧ್ಯಾಯ, 'ಇದು ಮಹತ್ವದ ವಿಷಯ. ನಕ್ಸಲರು, ಉಗ್ರರು ಹಾಗೂ ಪ್ರತ್ಯೇಕತಾವಾದಿಗಳು ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ₹ 80 ಸಾವಿರ ಕೋಟಿ ಮೌಲ್ಯದ ನೋಟುಗಳ ವಿನಿಮಯವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು' ಎಂದು ಮನವಿ ಮಾಡಿದರು.
ತಮ್ಮ ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಉಪಾಧ್ಯಾಯ ಮಾಡಿದ್ದ ಮನವಿಯನ್ನು ನ್ಯಾಯಪೀಠ ಜೂನ್ 1ರಂದು ತಿರಸ್ಕರಿಸಿತ್ತು. 'ಬೇಸಿಗೆ ರಜೆಯಲ್ಲಿ ಇಂಥ ಅರ್ಜಿಗಳ ವಿಚಾರಣೆ ನಡೆಸುವುದಿಲ್ಲ' ಎಂದೂ ಹೇಳಿತ್ತು.