ಕಾಸರಗೋಡು: ಹಕ್ಕು ಪತ್ರ ವಿತರಣೆಯಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಂದಾಯ ಇಲಾಖೆಯು ಜುಲೈ 5 ರಿಂದ ಆಗಸ್ಟ್ 20 ರವರೆಗೆ ಎಲ್ಲಾ 140 ಕ್ಷೇತ್ರಗಳಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಹಕ್ಕುಪತ್ರ ಅಸಂಬ್ಲಿ ಆಯೋಜಿಸಲಿದೆ ಎಂದು ಕಂದಾಯ, ಸರ್ವೆ ಮತ್ತು ವಸತಿ ಖಾತೆ ಸಚಿವ ಕೆ.ರಾಜನ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾ ಟೌನ್ ಹಾಲ್‍ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಹಕ್ಕುಪತ್ರ ವಿತರಣಾ ಮೇಳ ಉದ್ಘಾಟಿಸಿ ಮಾತನಾಡಿದರು. ಹಕ್ಕುಪತ್ರ ಅಸಂಬ್ಲಿಯಲ್ಲಿ ತ್ರಿಸ್ತರ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಕಂದಾಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಇದಕ್ಕಾಗಿ ಕ್ಷೇತ್ರವಾರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು.
ಭೂಮಿ ವಿತರಣೆಗೆ ಸಂಬಂಧಿಸಿದ ಕ್ರಮಗಳನ್ನು ತ್ವರಿತಗೊಳಿಸಲು ರಾಜ್ಯದಲ್ಲಿ ಹಕ್ಕುಪತ್ರ ಆಯೋಗ ರಚಿಸಲಾಗುವುದು. ಮುಖ್ಯ ಕಾರ್ಯದರ್ಶಿ ಅಧ್ಯಕ್ಷರು, ಕಂದಾಯ ಪ್ರಧಾನ ಕಾರ್ಯದರ್ಶಿ ಸಂಚಾಲಕರು ಮತ್ತು ಏಳು ಇಲಾಖಾ ಕಾರ್ಯದರ್ಶಿಗಳು ಸದಸ್ಯರಾಗಿರುವ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎ.ಕೆ.ಎಂ.ಅಶ್ರಫ್, ಸಿ.ಎಚ್.ಕುಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ವಾರ್ಡ್ ಕೌನ್ಸಿಲರ್ ವಂದನಾ ಶ್ರೀಧರ, ಎಡಿಎಂ ಕೆ.ನವೀನ್ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಜೆಗ್ಗಿ ಪಾಲ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸ್ವಾಗತಿಸಿದರು. ಆರ್‍ಡಿಒ ಅತುಲ್ ಸ್ವಾಮಿನಾಥ್ ವಂದಿಸಿದರು.
1619 ಹಕ್ಕುಪತ್ರ ವಿತರಣೆ:
ಮುನ್ಸಿಪಲ್ ಟೌನ್ ಹಾಲ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಹಕ್ಕುಪತ್ರ ಮೇಳದಲ್ಲಿ 1619 ಮಂದಿಗೆ ಹಕ್ಕುಪತ್ರ ವಿತರಿಸಲಾಯಿತು. ಎಲ್ ಟಿ ವರ್ಗದಲ್ಲಿ 1219 ಮಂದಿಗೆ ಹಾಗೂ ಎಲ್ ಟಿ ದೇವಸ್ವಂ ವಿಭಾಗದಲ್ಲಿ 165 ಮಂದಿಗೆ ಹಕ್ಕುಪತ್ರ ನೀಡಲಾಯಿತು. 1964ರ ಕನೂನು ಪ್ರಕಾರ ಮಂಜೇಶ್ವರ ತಾಲೂಕಿನಲ್ಲಿ 84, ಕಾಸರಗೋಡಿನಲ್ಲಿ 22, ಹೊಸದುರ್ಗದಲ್ಲಿ 49, ವೆಳ್ಳರಿಕುಂಡ್‍ನಲ್ಲಿ 29 ಜನರಿಗೆ ಎಲ್‍ಎ ವರ್ಗದಲ್ಲಿ ಹಕ್ಕುಪತ್ರ ನೀಡಲಾಯಿತು. 1995ರ ಮುನ್ಸಿಪಲ್ ಕಾನೂನು ಪ್ರಕಾರ ಕಾಸರಗೋಡಿನಲ್ಲಿ 2 ಹಕ್ಕುಪತ್ರ ಸೇರಿದಂತೆ ಕಳೆದ ಹಲವು ವರ್ಷಗಳಿಂದ ನಾನಾ ಕಾರಣಗಳಿಂದ ಲಭಿಸದವರಿಗೆ ಹಕ್ಕು ಪತ್ರ ವಿತರಿಸಲಾಯಿತು.