ಇಂಫಾಲ್: ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಬೇಕೆಂದು ಸರ್ಕಾರಕ್ಕೆ ಮಾರ್ಚ್ 27ರಂದು ಔಪಚಾರಿಕವಾಗಿ ಶಿಫಾರಸು ಮಾಡಿದ್ದ ಆದೇಶದ ಬದಲಾವಣೆಗೆ ಸಂಬಂಧಿಸಿದಂತೆ ಮಣಿಪುರ ಹೈಕೋರ್ಟ್‌ಕ್ಕೆ ಸೋಮವಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗಿದೆ.
ಈ ಕುರಿತು ಮೈತೇಯಿ ಬುಡಕಟ್ಟು ಒಕ್ಕೂಟ(ಎಂಟಿಯು) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ವಿ. ಮುರುಳೀಧರನ್, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವಿವರಣೆ ಕೋರಿ ನೋಟಿಸ್ ಜಾರಿಗೊಳಿಸಿದರು. ಬಳಿಕ ಜುಲೈ 5ಕ್ಕೆ ವಿಚಾರಣೆಯನ್ನು ಮುಂದೂಡಿದರು.
'ಆದೇಶ ಲಭಿಸಿದ ನಾಲ್ಕು ವಾರದೊಳಗೆ ಮೈತೇಯಿ ಜನರಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ಕಲ್ಪಿಸಬೇಕು' ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರೇ ಮಾರ್ಚ್‌ನಲ್ಲಿ ಆದೇಶಿಸಿದ್ದರು.
2013ರಿಂದಲೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಮೈತೇಯಿ ಸಮುದಾಯದವರು ಕೇಂದ್ರಕ್ಕೆ ಒತ್ತಾಯಿಸುತ್ತಿದ್ದಾರೆ. ಹಾಗಾಗಿ, ಅವರ ಈ ಮನವಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ರಾಜ್ಯಕ್ಕೆ ಈ ವಿಶೇಷಾಧಿಕಾರ ಇಲ್ಲ. ಈ ಬಗ್ಗೆ ಕೇಂದ್ರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಹೈಕೋರ್ಟ್ ಹೇಳಿದೆ.
'ಯಾವುದೇ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಗೊಳಿಸುವುದು ಮತ್ತು ತೆಗೆದುಹಾಕುವ ವಿಶೇಷಾಧಿಕಾರವು ಸಂಸತ್ ಮತ್ತು ರಾಷ್ಟ್ರಪತಿಗಷ್ಟೇ ಇದೆ. ಈ ಕುರಿತು ಸುಪ್ರೀಂ ಕೋರ್ಟ್ ಕೂಡ ಸ್ಪಷ್ಟಪಡಿಸಿದೆ. ಹಾಗಾಗಿ, ಹೈಕೋರ್ಟ್‌ನ ಆದೇಶ ಪಾಲಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಿಲ್ಲ. ನಾವು ಈ ಆದೇಶದಲ್ಲಿ ಕೆಲವು ಮಾರ್ಪಾಡುಗಳನ್ನು ಬಯಸಿದ್ದೇವೆ' ಎಂದು ಎಂಟಿಯು ಪರ ವಕೀಲ ಅಜೋಯ್ ಪೆಬಮ್ ತಿಳಿಸಿದರು.
'ಏಕಪೀಠ ನೀಡಿದ್ದ ಆದೇಶವನ್ನು ಪರಿಷ್ಕರಿಸಲು ಕೋರಿದ್ದೇವೆ. ತನಗೆ ಸೇರ್ಪಡೆಗೊಳಿಸುವ ಅಧಿಕಾರ ಇಲ್ಲವೆಂದು ರಾಜ್ಯ ಸರ್ಕಾರವು ಹೈಕೋರ್ಟ್‌ಗೆ ತನ್ನ ಅಭಿಪ್ರಾಯ ತಿಳಿಸಲಿದೆ ಎಂದು ನಿರೀಕ್ಷಿಸಿದ್ದೇವೆ' ಎಂದರು.
ಕುಕಿಗಳಿಗೆ ಸೇನಾ ಭದ್ರತೆ ಕೋರಿ 'ಸುಪ್ರೀಂ'ಗೆ ಅರ್ಜಿ
ಕುಕಿ ಬುಡಕಟ್ಟು ಜನರಿಗೆ ಸೇನಾ ಭದ್ರತೆ ನೀಡುವಂತೆ ಕೋರಿ ಮಣಿಪುರ ಬುಡಕಟ್ಟು ವೇದಿಕೆ ಸಲ್ಲಿಸಿದ್ದ ಅರ್ಜಿಯನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎಂ.ಎಂ. ಸುಂದರೇಶ್ ಅವರಿದ್ದ ರಜಾ ಕಾಲದ ವಿಭಾಗೀಯ ಪೀಠವು, 'ನ್ಯಾಯಾಲಯವು ಮಧ್ಯಪ್ರವೇಶಿಸಿದರೆ ರಾಜ್ಯದಲ್ಲಿ ಮತ್ತಷ್ಟು ಸಮಸ್ಯೆಗಳು ಸೃಷ್ಟಿಯಾಗಲಿವೆ' ಎಂದು ಅಭಿಪ್ರಾಯಪಟ್ಟಿತು.
'ಅಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಈ ಸಮಸ್ಯೆಯನ್ನು ಅಲ್ಲಿನ ಸರ್ಕಾರ ಬಗೆಹರಿಸಲಿದೆ. ಸುಪ್ರೀಂ ಕೋರ್ಟ್ ಪ್ರತಿಯೊಬ್ಬರಿಗೂ ರಕ್ಷಣೆ ನೀಡುವಂತೆ ಆದೇಶಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದ ಪೀಠವು, 'ಕುಕಿಗಳಿಗೆ ರಕ್ಷಣೆ ನೀಡುವಂತೆ ಸೇನೆ ಅಥವಾ ಕೇಂದ್ರದ ರಕ್ಷಣಾ ಪಡೆಗಳಿಗೆ ಕೋರ್ಟ್ ಆದೇಶಿಸುವ ಅಗತ್ಯವಿಲ್ಲ' ಎಂದು ಹೇಳಿತು.
ಎನ್‌ಜಿಒ ಪರ ಹಾಜರಿದ್ದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವ್ಸ್, 'ಮಣಿಪುರದಲ್ಲಿ 70 ಮಂದಿ ಬುಡಕಟ್ಟು ಜನರು ಮೃತಪಟ್ಟಿದ್ದಾರೆ' ಎಂದು ಹೇಳಿದರು.
'ಈ ಅಂಕಿಅಂಶಗಳನ್ನು ನಿಮಗೆ ಎಲ್ಲಿಂದ ಲಭಿಸಿದವು? ಎಂದು ಪ್ರಶ್ನಿಸಿದ ಪೀಠವು, ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಹಿಂಸಾಚಾರ ಪೀಡಿತ ನೆಲದಲ್ಲಿ ಶಾಂತಿ ಪುನರ್ ಸ್ಥಾಪನೆಗೆ ರಕ್ಷಣಾ ಪಡೆಗಳು ನಿರತವಾಗಿವೆ' ಎಂದು ಪೀಠದ ಗಮನಕ್ಕೆ ತಂದರು.