ಬದಿಯಡ್ಕ: ನಾವು ಮಾಡುವ ಪಾಪಪುಣ್ಯಗಳನ್ನು ದೇವರು ನೋಡುತ್ತಾನೆ ಎಂಬ ನಂಬಿಕೆ ನಮ್ಮೊಳಗಿದ್ದರೆ ಅದೆಷ್ಟೋ ಪುಣ್ಯಕಾರ್ಯಗಳನ್ನು ಮಾಡಲು ಪ್ರೇರೇಪಣೆಯಾಗುತ್ತದೆ. ದೇವಸ್ಥಾನವನ್ನು ನಂಬಿ ಇರುವ ಭಕ್ತರಿಗೆ ತಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ. ಧಾರ್ಮಿಕತೆಯ ಕ್ರಾಂತಿಗೆ ದೇವಸ್ಥಾನಗಳು ಬೇಕು ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ನುಡಿದರು.
ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಆರಂಭವಾಗಿದ್ದು, ಶ್ರೀ ಶಾಸ್ತಾರ ಸನ್ನಿಧಿಯ ಪ್ರತಿಷ್ಠಾ ಕಲಶದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆರ್ಶೀಚನವನ್ನು ನೀಡಿದರು.
ಕಾರ್ಮಾರು ಭೂಮಿ ಭಗವಂತನ ಶ್ರದ್ಧೆಯಿಂದ ಜಾಗೃತವಾಗಿ, ಭಕ್ತಿಯ ಸೇವೆಯ ಕರ್ಮಭೂಮಿಯಾಗಿ ಮೂಡಿಬರುತ್ತಿದೆ. ಭಾರತದಲ್ಲಿ ಇರುವಷ್ಟು ಪುಣ್ಯಭೂಮಿಗಳು ಬೇರೆಲ್ಲಿಯೂ ಇಲ್ಲ. ಸ್ಮರಣೆಮಾತ್ರದಲ್ಲಿ ನಮ್ಮ ಪಾಪ ಪರಿಹಾರವಾಗಲು ಸಾಧ್ಯವಿದೆ. ನಮ್ಮ ಪೂರ್ವಜರ ಕೊಡುಗೆಯ ಲಾಭವನ್ನು ನಾವು ಪಡೆದುಕೊಳ್ಳಬೇಕು. ಕೂಡಿಟ್ಟ ಹಣದಿಂದ ನೆಮ್ಮದಿ ಲಭಿಸುವುದಿಲ್ಲ. ಮನಃಶಾಂತಿಗಾಗಿ ಧಾರ್ಮಿಕತೆ ಬೇಕೇ ಬೇಕು. ಕ್ಷೇತ್ರದಿಂದ ಅಂತರ್ಮುಖಿಯಾಗಲು ಸಾಧ್ಯ. ಸಾಮಾಜಿಕ ವ್ಯವಸ್ಥೆಗಳು ಚೆನ್ನಾಗಿರಬೇಕಾದರೆ ಹೃದಯದಲ್ಲಿ ಧಾರ್ಮಿಕತೆ ಇರಬೇಕು. ಒಂದು ದೇವಸ್ಥಾನದಿಂದ ಅನೇಕ ಪ್ರಯೋಜನಗಳಿವೆ. ಎಲ್ಲರ ಬದುಕಿಗೆ ದಾರಿಯಾಗುವ ದೇವರನ್ನು ವಿಗ್ರಹದಲ್ಲಿ ಕಾಣುವುದರಿಂದ ನಮ್ಮ ಕಷ್ಟಗಳನ್ನು ದೂರಮಾಡಲು ಸಾಧ್ಯವಿದೆ. ಜೀವನದಲ್ಲಿ ಬರುವ ಕಷ್ಟಗಳು ಸಂಕಟಗಳನ್ನು ದೂರಮಾಡಲು ಇನ್ನೊಬ್ಬರ ಕಷ್ಟಗಳನ್ನು ನಾವು ಅರಿಯಬೇಕು. ಹೃದಯದಲ್ಲಿ ಸಮಾಜದ ಬಗ್ಗೆ ಕಾಳಜಿಯಿರುವ ಭಕ್ತಿ ಹುಟ್ಟಿಬರಬೇಕು. ಭಗವಂತನ ನಾಮಜಪದಿಂದ ನಮ್ಮ ಮನಸ್ಸು ಶುದ್ಧೀಕರಣವಾಗುತ್ತದೆ. ನಾವು ಉತ್ತಮ ಕಾರ್ಯಗಳನ್ನು ಮಾಡಿದಾಗ ಭಾರತ ಶುದ್ಧವಾಗುತ್ತದೆ. ಸಜ್ಜನರೆಲ್ಲಾ ಸಕ್ರಿಯರಾಗಿ ಸಮಾಜದ ಹಿತವನ್ನು ಕಾಯಬೇಕು. ಜಗತ್ತೆಂಬ ದೊಡ್ಡ ಮನೆಗೆ ಭಾರತವೆಂಬುದು ದೇವರ ಕೋಣೆ. ಇಲ್ಲಿ ದೇವರ ಉಪಾಸನೆ ಹೆಚ್ಚು ನಡೆದಾಗ ಜಗತ್ತಿಗೆ ಕಲ್ಯಾಣವಾಗುತ್ತದೆ. ದೇವಸ್ಥಾನದ ಜೀರ್ಣೋದ್ಧಾರವೆಂದರೆ ಜಗತ್ಕಲ್ಯಾಣ ಕಾರ್ಯ ಎಂದರು.
ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಮಾನ ಮಾಸ್ತರ್ ಕಾರ್ಮಾರು ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ. ಕಿಶೋರ್ ಕುಮಾರ್ ಕುಣಿಕುಳ್ಳಾಯ, ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಸುಬ್ರಹ್ಮಣ್ಯ ಕಾರ್ಮಾರು, ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯ ಪ್ರಬಂಧಕ ನಿತ್ಯಾನಂದ ಆರ್. ಮಾನ್ಯ, ಶ್ರೀಕ್ಷೇತ್ರದ ಆಡಳಿತ ಮೊಕ್ತೇಸರ ನರಸಿಂಹ ಭಟ್ ಕಾರ್ಮಾರು, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಟಿ.ಕೆ.ನಾರಾಯಣ ಭಟ್ ಪಂಜಿತ್ತಡ್ಕ, ನಿವೃತ್ತ ಮುಖ್ಯೋಪಾಧ್ಯಾಯ ಶಿವರಾಮ ಪಿ., ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೆ.ರಾಮ ಕಾರ್ಮಾರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು. ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಸ್ವಾಗತಿಸಿ, ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ ವಂದಿಸಿದರು.