ನವದೆಹಲಿ: ವಿವಾದಿತ ಜಾಹೀರಾತು ಪ್ರಸಾರ ಮಾಡಿದ ಆರೋಪದ ಮೇಲೆ ಆಯಪ್ ಆಧರಿತ ಫುಡ್ ಡೆಲಿವರಿ ಕಂಪನಿ ಜೊಮ್ಯಾಟೊಗೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು(ಎನ್‌ಸಿಎಸ್‌ಸಿ) ನೋಟಿಸ್ ಜಾರಿ ಮಾಡಿದೆ.
ಬಳಸಿ ಬಿಸಾಡಲಾದ ವಸ್ತುಗಳನ್ನು ಪುನರ್‌ಬಳಕೆ ಮಾಡಿ ತಯಾರಿಸಿದ ವಸ್ತುಗಳ ಜಾಹೀರಾತಿನಲ್ಲಿ ಲಗಾನ್ ಸಿನಿಮಾದಲ್ಲಿ 'ಕಚರಾ'(ದಲಿತ ವ್ಯಕ್ತಿ) ಪಾತ್ರ ನಿರ್ವಹಿಸಿದ್ದ ನಟ ಆದಿತ್ಯ ಲಾಖಿಯಾ ಅವರನ್ನು ತೋರಿಸಿದ ವಿವಾದದ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ.
ಈ ಕುರಿತಂತೆ ತನಿಖೆ ನಡೆಸುವಂತೆ ದೆಹಲಿ ಪೊಲೀಸ್ ಕಮೀಷನರ್ ಹಾಗೂ ಯೂಟ್ಯೂಬ್‌ನ ಸ್ಥಾನಿಕ ಕುಂದು ಕೊರತೆ ಅಧಿಕಾರಿಗೆ ಎನ್‌ಸಿಎಸ್‌ಸಿ ಸೂಚಿಸಿದ್ದು, ಕೈಗೊಂಡ ಕ್ರಮಗಳ ಬಗ್ಗೆ ಇ-ಮೇಲ್ ಅಥವಾ ಪತ್ರದ ಮೂಲಕ ತಿಳಿಸುವಂತೆ ಸೂಚಿಸಿದೆ..
ಜಾಹೀರಾತಿನಲ್ಲಿ ಕಚರಾ ಪಾತ್ರ ಮತ್ತು ಕಚರಾ(ಕಸ) ನಡುವೆ ಸಂಬಂಧ ಕಲ್ಪಿಸಲಾಗಿದೆ. ಜೂನ್ 5ರ ವಿಶ್ವರ ಪರಿಸರ ದಿನದಂದು ಈ ಜಾಹೀರಾತು ಪ್ರಸಾರವಾಗಿತ್ತು.
ಸುಮಾರು ಎರಡು ನಿಮಿಷಗಳ ಜಾಹೀರಾತಿನಲ್ಲಿ, ಲಖಿಯಾ ಅವರನ್ನು ದೀಪ, ಕಾಗದ, ಪೇಪರ್ ವೇಯ್ಟ್, ನೀರಿನ ಕ್ಯಾನ್ ಮತ್ತು ವಿವಿಧ ರೀತಿಯ ಜಾಕೆಟ್‌ಗಳಂತೆ ಚಿತ್ರಿಸಲಾಗಿದೆ. ಪ್ರತಿ ವಸ್ತು ತಯಾರಿಸಲು ಎಷ್ಟು ಮರುಬಳಕೆಯ ವಸ್ತುವನ್ನು ಬಳಸಲಾಗಿದೆ ಎಂಬ ವಿವರಣೆಯ ಪಠ್ಯವೂ ಇದರಲ್ಲಿದೆ.
ನಿಗದಿತ ಸಮಯದಲ್ಲಿ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸದಿದ್ದರೆ ಸಂವಿಧಾನದ ಆರ್ಟಿಕಲ್ 338ರ ಅಡಿ ನೀಡಲಾದ ಅಧಿಕಾರ ಬಳಸಿ ಖುದ್ದು ಹಾಜರಿಗೆ ಸಮನ್ಸ್ ನೀಡಲಾಗುವುದು ಎಂದು ಆಯೋಗದ ಅಧ್ಯಕ್ಷ ವಿಜಯ್ ಸಾಂಪ್ಲಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಜಾತಿಗೆ ಸಂಬಂಧಿಸಿದ ಜಾಹೀರಾತು ಎಂದು ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಜೊಮ್ಯಾಟೊ ಕಂಪನಿ ವಿವಾದಿತ ಜಾಹೀರಾತನ್ನು ಡಿಲೀಟ್ ಮಾಡಿದ್ದು, ಅಧಿಕೃತ ಟ್ವಿಟರ್ ಖಾತೆಯಲ್ಲಿ ಕ್ಷಮೆ ಕೇಳಿದೆ. ಹಾಸ್ಯಮಯ ರೀತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಮರುಬಳಕೆ ಕುರಿತಾದ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶವಾಗಿತ್ತು ಎಂದು ಕಂಪನಿ ಹೇಳಿದೆ.