ತಿರುವನಂತಪುರಂ: ರಾಜ್ಯಾದ್ಯಂತ ವ್ಯಾಪಿಸಿರುವ ಸಾಂಕ್ರಾಮಿಕ ಜ್ವರದ ಹಿನ್ನೆಲೆಯಲ್ಲಿ ಸಚಿವರಾದ ವೀಣಾ ಜಾರ್ಜ್, ಎಂ.ಬಿ. ರಾಜೇಶ್, ವಿ. ಶಿವಂಕುಟ್ಟಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಎಲ್ಲಾ ಜಿಲ್ಲೆಗಳನ್ನು ಹಾಟ್‍ಸ್ಪಾಟ್ ಮಿತಿಗೆ ಒಳಪಡಿಸಲು ಮತ್ತು ತಡೆಗಟ್ಟುವ ಚಟುವಟಿಕೆಗಳನ್ನು ತೀವ್ರಗೊಳಿಸಲು ಸಭೆ ನಿರ್ಧರಿಸಿದೆ.
ಜ್ವರ ಹರಡುವ ಸಾಧ್ಯತೆಯಿರುವುದರಿಂದ ಜುಲೈ ತಿಂಗಳಲ್ಲಿ ತಡೆಗಟ್ಟುವಿಕೆ ಮತ್ತು ಜಾಗರೂಕತೆಯನ್ನು ತೀವ್ರಗೊಳಿಸಲಾಗುತ್ತದೆ. ಮಕ್ಕಳಲ್ಲಿ ಸಾಂಕ್ರಾಮಿಕ ಜ್ವರದ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸಲು ಇಂದು ಎಲ್ಲ ಶಾಲೆಗಳಲ್ಲಿ ಆರೋಗ್ಯ ಸಭೆ ನಡೆಸಲಾಯಿತು. ಆರೋಗ್ಯ ಇಲಾಖೆಯ ಹಾಟ್‍ಸ್ಪಾಟ್ ತಪಾಸಣೆಗೆ ಶಾಲೆಗಳನ್ನೂ ಸೇರಿಸಲಾಗುವುದು.
ಒಂದು ತರಗತಿಯಲ್ಲಿ ಐದಕ್ಕಿಂತ ಹೆಚ್ಚು ಮಕ್ಕಳು ಜ್ವರದಿಂದ ಗೈರುಹಾಜರಾದರೆ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಬೇಕು. ಸಭೆಯ ನಿರ್ಧಾರಗಳನ್ನು ವಿವರಿಸಿ ಮಾತನಾಡಿದ ಸಚಿವೆ ವೀಣಾ ಜಾರ್ಜ್ ಜ್ವರ ಪೀಡಿತ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ಸ್ಥಳೀಯಾಡಳಿತ ಸಂಸ್ಥೆಗಳು ಸ್ವಚ್ಛತಾ ಕಾರ್ಯಗಳನ್ನು ಬಲಪಡಿಸಿ ಡ್ರೈ ಡೇ ಆಚರಿಸುವುದಾಗಿ ಸಚಿವ ಎಂ.ಬಿ. ರಾಜೇಶ್ ಹೇಳಿದರು.
ಮುಂಬರುವ ವಾರಗಳಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಡ್ರೈ ಡೇ ದಿನಗಳನ್ನು ಆಚರಿಸಲಾಗುತ್ತದೆ. ಶುಕ್ರವಾರ ಶಾಲೆಗಳು, ಶನಿವಾರ ಕಚೇರಿಗಳು ಮತ್ತು ಭಾನುವಾರ ಮನೆಗಳಲ್ಲಿ ಡ್ರೈ ಡೇ ಆಚರಿಸಬೇಕು.
ಸ್ಥಳೀಯಾಡಳಿತ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಷ್, ವೈದ್ಯಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಡಾ. ರತನ್ ಖೇಲ್ಕರ್, ಸಾರ್ವಜನಿಕ ಶಿಕ್ಷಣ ನಿರ್ದೇಶಕ ಎಸ್. ಶಾನವಾಸ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.