ಪಟ್ನಾ: ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಸರ್ಕಾರ ರಚಿಸಲು ವಿರೋಧಪಕ್ಷಗಳ ನಾಯಕರ ಚಿಂತನ ಶಿಬಿರವು ಶುಕ್ರವಾರ ಇಲ್ಲಿ ನಡೆಯಲಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಆಯೋಜಿಸುತ್ತಿರುವ ಈ ಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮುಖಂಡ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ, ಎಎಪಿಯ ಅರವಿಂದ ಕೇಜ್ರಿವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಮಹಾರಾಷ್ಟ್ರದ ಉದ್ಧವ ಠಾಕ್ರೆ, ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಇತರ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
'2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸುವ ತಂತ್ರ ರೂಪಿಸಲಷ್ಟೇ ಸಭೆಯಲ್ಲಿ ಆದ್ಯತೆ ನೀಡಲಾಗುತ್ತಿದೆ. ಸೀಟುಗಳ ಹಂಚಿಕೆಯಾಗಲೀ ಅಥವಾ ನಾಯಕತ್ವ ವಿಷಯವನ್ನು ಸಭೆಯಲ್ಲಿ ಚರ್ಚಿಸದಿರಲು ನಿರ್ಧರಿಸಲಾಗಿದೆ' ಎಂದು ಮೂಲಗಳು ತಿಳಿಸಿವೆ.
'ಮಣಿಪುರ ಗಲಭೆ ಹಾಗೂ ಇದನ್ನು ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಕುರಿತು ನಾಯಕರು ಚರ್ಚೆ ನಡೆಸಲಿದ್ದಾರೆ. ಇಂಥ ಇನ್ನೂ ಅನೇಕ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯನ್ನು ಕಟ್ಟಿಹಾಕುವ ಬಗೆ ಕುರಿತು ಸಭೆಯಲ್ಲಿ ಚರ್ಚೆಗಳು ನಡೆಯಲಿವೆ' ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ವ್ಯಕ್ತಿ ತಿಳಿಸಿದ್ದಾರೆ.
ಇವುಗಳೊಂದಿಗೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಸೇವಾ ವಿಷಯದಲ್ಲಿ ಆಡಳಿತಾತ್ಮಕ ನಿಯಂತ್ರಣ ಕುರಿತು ಕೇಂದ್ರದ ಸರ್ವಾಧಿಕಾರಿ ಧೋರಣೆ ಕುರಿತು ಅರವಿಂದ ಕೇಜ್ರಿವಾಲ್ ಅವರು ಸಭೆಯಲ್ಲಿ ಚರ್ಚಿಸಲಿದ್ದಾರೆ ಎಂದೆನ್ನಲಾಗಿದೆ. ಆದರೆ ಎಎಪಿಯ ಈ ಚರ್ಚೆಗೆ ಕಾಂಗ್ರೆಸ್ ನಡೆ ಏನು ಎಂಬ ಗೊಂದಲವೂ ಮನೆ ಮಾಡಿದೆ. ಆದರೆ ಕೇಂದ್ರದ ನಡೆ ಕುರಿತು ಕಾಂಗ್ರೆಸ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದೆ' ಎಂಬ ವಿಶ್ವಾಸವನ್ನು ಕೇಜ್ರಿವಾಲ್ ಅವರು ವ್ಯಕ್ತಪಡಿಸಿದ್ದರು.
'ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಮುರ್ಷಿದಾಬಾದ್ ಜಿಲ್ಲೆಯಲ್ಲಿ ಧರಣಿ ನಡೆಸುತ್ತಿದ್ದಾರೆ. ಈ ವಿಷಯವೂ ಪಟ್ನಾ ಸಭೆಯಲ್ಲಿ ಚರ್ಚೆಗೆ ಬರುವ ಸಾದ್ಯತೆ ಇದೆ.
ವಿರೋಧ ಪಕ್ಷಗಳ ಪಾಟ್ನಾ ಸಭೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ, 'ತಮ್ಮ ಸ್ಥಾನಮಾನದ ಕುರಿತೇ ವಿರೋಧಪಕ್ಷಗಳಲ್ಲಿ ಪರಸ್ಪರ ಗೊಂದಲಗಳಿವೆ. ಈ ಕೂಟದ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂಬುದೇ ಇನ್ನೂ ತೀರ್ಮಾನವಾಗಿಲ್ಲ' ಎಂದು ವ್ಯಂಗ್ಯವಾಡಿತ್ತು.
ಇದಕ್ಕೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, 'ವಿರೋಧಪಕ್ಷಗಳಿಗೆ ನಾಯಕತ್ವದ ಮುಖ ಅಗತ್ಯವಿಲ್ಲ. ಇದು ಒಗ್ಗಟ್ಟಿನ ಹೋರಾಟ. 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ ನಂತರ ಎಲ್ಲರೂ ಚರ್ಚಿಸಿ ನಿರ್ಧರಿಸಲಾಗುವುದು' ಎಂದಿದ್ದಾರೆ.
ಪಟ್ನಾ ಸಭೆ ಕುರಿತು ಪ್ರತಿಕ್ರಿಯಿಸಿರುವ ಸಿಪಿಐ ಮುಖಂಡ ಡಿ. ರಾಜಾ, 'ಜಾತ್ಯತೀತ ಪಕ್ಷಗಳು ಒಂದಾಗಿ ಬಿಜೆಪಿಯನ್ನು ಮಣಿಸಬೇಕಿದೆ. ಸ್ಥಾನಗಳನ್ನು ಗೆಲ್ಲುವುದಷ್ಟೇ ಈ ಹೋರಾಟದ ಮುಖ್ಯ ಉದ್ದೇಶವಲ್ಲ. ಪ್ರಜಾಪ್ರಭುತ್ವ, ಸಂವಿಧಾನ, ದೇಶದ ಜಾತ್ಯತೀತ ಸತ್ವ ಮತ್ತು ಸ್ವತಂತ್ರ ಸಂಸತ್ತಿನ ಸಾರ್ವಭೌಮತ್ವವನ್ನು ಕಾಪಾಡುವುದೇ ಮುಖ್ಯ ಉದ್ದೇಶವಾಗಿದೆ' ಎಂದಿದ್ದಾರೆ.
'ಚುನಾವಣೆ ಘೋಷಣೆಯಾದ ನಂತರ ಸೀಟುಗಳ ಹಂಚಿಕೆ ಕುರಿತು ಆಯಾ ರಾಜ್ಯ ಮಟ್ಟದಲ್ಲಿ ಚರ್ಚೆಗಳು ನಡೆಯಲಿವೆ. ಇದನ್ನು ಅಲ್ಲಿನ ಪಕ್ಷಗಳ ಹಿಡಿತವನ್ನು ಪರಿಗಣಿಸಿ ನಿರ್ಧರಿಸಲಾಗುವುದು. ಈ ವಿಷಯದಲ್ಲಿ ಜಾತ್ಯತೀತ ನಿಲುವುಳ್ಳ ಪಕ್ಷಗಳು ಇನ್ನಷ್ಟು ಉದಾರವಾಗಿ ಹಾಗೂ ಪರಸ್ಪರ ಮಾತುಕತೆ ಮೂಲಕ ಹಂಚಿಕೆ ಮಾಡಿಕೊಳ್ಳಬೇಕಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಟ್ನಾ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಸಿಪಿಐಎಂನ ಸೀತಾರಾಮ್ ಯಚೂರಿ, ದೀಪಂಕರ್ ಭಟ್ಟಾಚಾರ್ಯ ಅವರೂ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಮತ್ತೊಂದೆಡೆ ಬಿಜೆಪಿಯೇತರ ಪಕ್ಷಗಳಾದ ತೆಲಂಗಾಣದ ಭಾರತ ರಾಷ್ಟ್ರ ಸಮಿತಿ, ಒಡಿಶಾದ ಬಿಜು ಜನತಾದಳ, ಬಹುಜನ ಸಮಾಜ ಪಾರ್ಟಿ ಹಾಗೂ ವೈಎಸ್‌ಆರ್ ಕಾಂಗ್ರೆಸ್ ಸಭೆಯಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.