ತಿರುವನಂತಪುರ: ಆಸ್ಪತ್ರೆಯೊಂದರಲ್ಲಿ ಸುಮಾರು ಹತ್ತು ನಾಗರಹಾವಿನ ಮರಿಗಳು ಪತ್ತೆಯಾದ್ದರಿಂದ ಸರ್ಜಿಕಲ್ ವಾರ್ಡ್ ಬಂದ್ ಮಾಡಲಾಗಿದ್ದು, ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ಇಲ್ಲಿನ ಪೆರಿಂತಲಮನ್ನ ಎಂಬಲ್ಲಿನ ಜಿಲ್ಲಾ ಆಸ್ಪತ್ರೆಯ ಸರ್ಜಿಕಲ್ ವಾರ್ಡ್ನಲ್ಲಿ ಮೂರು ದಿನಗಳಲ್ಲಿ ಹತ್ತು ನಾಗರಹಾವಿನ ಮರಿಗಳು ಪತ್ತೆಯಾದ್ದರಿಂದ ರೋಗಿಗಳನ್ನು ಆಸ್ಪತ್ರೆಯ ಇನ್ನೊಂದು ಭಾಗಕ್ಕೆ ಸ್ಥಳಾಂತರ ಮಾಡಿ ವಾರ್ಡ್ ಬಾಗಿಲು ಮುಚ್ಚಲಾಗಿದೆ. ರೋಗಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದ್ದಾಗಿ ಆಸ್ಪತ್ರೆಯವರು ತಿಳಿಸಿದ್ದಾರೆ.
ವಾರ್ಡ್ಗೆ ಸಮೀಪದಲ್ಲಿ ದಟ್ಟವಾದ ಪೊದೆಗಳಿರುವುದಲ್ಲದೆ, ವಾರ್ಡ್ ನೆಲದಲ್ಲಿನ ಟೈಲ್ಸ್ ಕಿತ್ತುಹೋಗಿದ್ದು, ಅವುಗಳ ಎಡೆಯಲ್ಲಿ ಹಾವಿನ ಮರಿಗಳು ಅವಿತುಕೊಳ್ಳುವಂತಾಗಿರುವುದೇ ಈ ಅವಸ್ಥೆಗೆ ಕಾರಣ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ಕಣ್ಣೂರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಗರ್ಭಿಣಿಯ ಜತೆಗಿದ್ದ ತಾಯಿ ಹಾವಿನ ಕಡಿತಕ್ಕೆ ಒಳಗಾಗಿದ್ದರು.