ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಒಗ್ಗೂಡಲು ಬಿಹಾರದ ಪಟ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ಭಂಗವಾಗದಂತೆ ಮುಂದುವರಿಯಲು ವಿವಿಧ ನಾಯಕರ ನೇತೃತ್ವದಡಿ ಸಮಿತಿಗಳನ್ನು ರಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಆತಿಥ್ಯದಲ್ಲಿ ಜೂನ್ 12ರಂದು ಪ್ರತಿಪಕ್ಷಗಳ ಸಭೆ ನಿಗದಿಯಾಗಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷದ ಮುಖ್ಯಸ್ಥರು ಪೂರ್ವ ನಿಗದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಗಾಗಿ, ಅವರು ಅಂದಿನ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣ ಸಭೆಗೆ ಮರು ದಿನಾಂಕ ನಿಗದಿಯಾಗಲಿದೆ.
ವಿವಿಧ ಪಕ್ಷಗಳ ಮುಖ್ಯಸ್ಥರು ಸಮಯಕ್ಕೆ ಸರಿಯಾಗಿ ಸಿಗುವುದಿಲ್ಲ. ಇದರಿಂದ ಅವರ ಸಲಹೆ ಪಡೆಯಲು ಸಮಸ್ಯೆಯಾಗುತ್ತದೆ. ಹಾಗಾಗಿ, ಮೂರ್ನಾಲ್ಕು ಸಮಿತಿಗಳನ್ನು ರಚಿಸಲು ಚಿಂತನೆ ನಡೆಸಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಸಮಿತಿಗಳ ರಚನೆ ಬಗ್ಗೆ ಕೆಲವು ಪಕ್ಷಗಳು ಸಹಮತ ಸೂಚಿಸಿವೆ. ಎಲ್ಲರ ನಡುವೆ ಹೊಂದಾಣಿಕೆ ಕಾಯ್ದುಕೊಳ್ಳಲು ಇದು ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿವೆ. ಆದರೆ, ಇಂತಹ ಸಮಿತಿಗಳು ನಮ್ಮ ನಡುವೆಯೇ ಭಿನ್ನಾಭಿಪ್ರಾಯ ಸೃಷ್ಟಿಗೆ ಎಡೆಮಾಡಿಕೊಡುವ ಸಾಧ್ಯತೆ ಇದೆ ಎಂಬುದು ಕೆಲವು ನಾಯಕರ ನಂಬಿಕೆ. ಹಾಗಾಗಿ, ಅವರಿಗೆ ಸಮಿತಿಗಳ ರಚನೆ ಬಗ್ಗೆ ಉತ್ಸಾಹವಿಲ್ಲ ಎನ್ನುತ್ತವೆ ಮೂಲಗಳು.
ಪರಸ್ಪರ ಸಹಕಾರ ವೃದ್ಧಿಗೆ ಔಪಚಾರಿಕ ಸಮಿತಿಗಳನ್ನು ರಚಿಸುವುದು ಉತ್ತಮ. ಆರಂಭಿಕ ಹಂತದಲ್ಲಿಯೇ ಸಮಿತಿ ರಚನೆ ಸರಿಯಲ್ಲ ಎಂಬುದು ಆ ನಾಯಕರ ಅಭಿಪ್ರಾಯವಾಗಿದೆ.
ಸಭೆಯ ಮರು ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಅಲ್ಲದೇ, ಸಭೆಯಲ್ಲಿ ಆಯಾ ಪಕ್ಷದ ಮುಖ್ಯಸ್ಥರೇ ಭಾಗವಹಿಸಬೇಕು ಎಂದು ನಿತೀಶ್ ಈ ಹಿಂದೆ ಸ್ಪಷ್ಟಪಡಿಸಿದ್ದರು. ಆದರೆ, ಕೆಲವು ಪಕ್ಷಗಳು ಮುಖ್ಯಸ್ಥರ ಬದಲಿಗೆ ಅವರ ಪ್ರತಿನಿಧಿಗಳನ್ನು ಕಳುಹಿಸುವುದಾಗಿ ಪ್ರಕಟಿಸಿರುವುದು ನಿತೀಶ್‌ಗೆ ಅಸಮಾಧಾನ ತಂದಿದೆ.
ವಿರೋಧ ಪಕ್ಷಗಳ ತಂತ್ರಕ್ಕೆ ಸೆಡ್ಡು ಹೊಡೆಯಲು ಬಿಜೆಪಿಯೂ ತೀರ್ಮಾನಿಸಿದ್ದು, ಟಿಡಿಪಿ ಹಾಗೂ ಅಕಾಲಿ ದಳದ ಜೊತೆ ಮೈತ್ರಿಗೆ ಮುಂದಾಗಿದೆ. ಇದರ ಭಾಗವಾಗಿ ಇತ್ತೀಚೆಗೆ ದೆಹಲಿಯಲ್ಲಿ ಟಿಡಿಪಿ ಮುಖ್ಯಸ್ಥ ಎನ್. ಚಂದ್ರಬಾಬುನಾಯ್ಡು ಜೊತೆಗೆ ಕೇಂದ್ರ ಗೃಹ ಸಚಿವ ಅಮಿತ್ ಮಾತುಕತೆ ನಡೆಸಿದ್ದಾರೆ.